ಪುತ್ತೂರು : ವಿಟ್ಲ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಸಾಲೆತ್ತೂರು ಸಮೀಪ ಮುಸ್ಲಿಂ ಸಮುದಾಯದ ಯುವಕರು ಮದುವೆ ಸಮಾರಂಭದಲ್ಲಿ ಮದುಮಗನಿಗೆ ಕೊರಗಜ್ಜನ ವೇಷ ಧರಿಸಿ ಕುಣಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಅನ್ನುವ ಆರೋಪ ಕೇಳಿ ಬಂದಿದ್ದು, ಕರಾವಳಿಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸಾಲೆತ್ತೂರಿನ ಅಜೀಜ್ ಅನ್ನುವವರ ಮಗ ಮದುವೆ ಕಾಸರಗೋಡು ಮಂಜೇಶ್ವರದ ಉಪ್ಪಳ ಸೋಂಕಳ್ಳು ನಿವಾಸಿ ಉಮರುಲ್ ಭಾಷಿತ್ ಅನ್ನುವವರ ಜೊತೆ ನಡೆದಿತ್ತು. ಜನವರಿ 6 ರಂದು ವಿವಾಹ ನಡೆದಿದ್ದು, ಅಂದೇ ರಾತ್ರಿ ವಧುವಿನ ಮನೆಯಲ್ಲಿ ಜೌತಣ ಕೂಟ ಏರ್ಪಡಿಸಲಾಗಿತ್ತು.
ಈ ವೇಳೆ ವರನ ಮನೆಗೆ ಆಗಮಿಸಿದ ವರನ ಸ್ನೇಹಿತರು ವರನಿಗೆ ಅಡಿಕೆ ಟೋಪಿ ಹಾಕಿ ಮೆರವಣಿಗೆಯಲ್ಲಿ ಕರೆ ತಂದಿದ್ದರು. ಮದು ಮಗನಿಗೆ ಬಣ್ಣ ಹಚ್ಚಿ ಕೊರಗಜ್ಜನ ಹೋಲುವ ವೇಷ ತೊಡಿಸಿ ಕುಣಿಸಿದ್ದರು.
ಈ ಸಂಬಂಧ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಕಾರ್ಯದರ್ಶಿ ಚೇತನ್ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವರ ಉಮರುಲ್ ಭಾಷಿತ್ ಮತ್ತು ಇತರರ ವಿರುದ್ಧದ ದೂರು ದಾಖಲಾಗಿದೆ. ಇದೀಗ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
Discussion about this post