Mangalore – ಮಂಗಳೂರು : ಕೇರಳದಿಂದ ಕರ್ನಾಟಕ ಪ್ರವೇಶಿಸುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ಎಡಿಜಿಪಿ ಪ್ರತಾಪ್ ರೆಡ್ಡಿ ರಾಜ್ಯ ಸರ್ಕಾರದ ನಿರ್ಣಯವನ್ನು ಪುನರುಚ್ಛರಿಸಿದ್ದಾರೆ. ಕೇರಳ ಕರ್ನಾಟಕ ಗಡಿಯಲ್ಲಿರುವ ತಲಪಾಡಿಗೆ ಭೇಟಿ ನೀಡಿದ ಅವರು, ಕೇರಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವೇಶಕ್ಕೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ಹೇಳಿದರು. ಈ ಮೂಲಕ ಗಡಿನಾಡ ಕನ್ನಡಿಗರು ನಡೆಸುತ್ತಿರುವ ಪ್ರತಿಭಟನೆಗೆ ಮಣಿಯುವುದಿಲ್ಲ ಅನ್ನುವ ಸಂದೇಶ ಸಾರಿದ್ದಾರೆ.
ಬಿಗಿ ಪೊಲೀಸ್ ಭದ್ರತೆಯ ಹಿನ್ನೆಲೆಯಲ್ಲಿ ತುರ್ತು ಭೇಟಿ ಹಾಗೂ ಪರೀಕ್ಷೆಯ ಬರೆಯಲು ಆಗಮಿಸುವ ವಿದ್ಯಾರ್ಥಿಗಳಿಗೆ ಮಾತ್ರವೇ ಹಾಲ್ ಟಿಕೆಟ್ ತೋರಿಸಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿದೆ. ಜೊತೆಗೆ ಕೇರಳದಿಂದ ರೈಲು ಮೂಲಕ ಆಗಮಿಸುವವರಿಗೂ ಪರೀಕ್ಷೆ ನಡೆಸಲಾಗುತ್ತಿದ್ದು, ನಗರದ ಟೌನ್ ಹಾಲ್ ನಲ್ಲಿ ಇದಕ್ಕಾಗಿ ಪ್ರತ್ಯೇಕ ಕೇಂದ್ರ ತೆರೆಯಲಾಗಿದೆ ಅಂದರು.
ಕಾಸರಗೋಡು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ದಕ್ಷಿಣ ಕನ್ನಡ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಎರಡೂ ಜಿಲ್ಲೆಗಳ ನಡುವೆ ಯಾವುದೇ ಗೊಂದಲವಿಲ್ಲ. ಕರ್ನಾಟಕದ ಗಡಿಯೊಳಗೆ ಪ್ರವೇಶ ಮಾಡುವವರನ್ನು ಕಠಿಣ ತಪಾಸಣೆಗೆ ಒಳಪಡಿಸಲಾಗುತ್ತಿದೆ ಅಂದರು.
ಇನ್ನು ನೆಗೆಟಿವ್ ವರದಿ ಕಡ್ಡಾಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದ ವಿರುದ್ಧ ಗಡಿನಾಡ ಕನ್ನಡಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ತಲಪಾಡಿ ಗಡಿಯಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ. ನಾವು ಕೂಡಾ ಕನ್ನಡ ಮಾತೆಯ ಮಕ್ಕಳು, ನಮಗ್ಯಾಕೆ ಈ ಅನ್ಯಾಯ ಅನ್ನುವುದು ಅವರ ಆಕ್ರೋಶ.
Discussion about this post