ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಅಲೆ ಭೀತಿ ಹೆಚ್ಚಾಗಿದೆ. ಕೇರಳದಲ್ಲಿ ಏರುತ್ತಿರುವ ಕೊರೋನಾ ಸೋಂಕಿನ ಪ್ರಮಾಣ ಕರಾವಳಿ ಜಿಲ್ಲೆಗಳ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮೂರನೇ ಅಲೆಯ ಅಬ್ಬರವನ್ನು ಆದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಶತ ಪ್ರಯತ್ನಗಳು ನಡೆಯುತ್ತಿದೆ.ಈ ನಡುವೆ ಇಂದು ಜಿಲ್ಲೆ ಲಸಿಕಾ ಸಾಧನೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರಾರಂಭಿಸಿದೆ.
ಈಗಾಗಲೇ ಜಿಲ್ಲೆಯಲ್ಲಿ ಲಸಿಕೆ ಕೊರತೆಯಿದ್ದು, ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಸಬೇಕು ಎಂದು ಶಾಸಕ ಯುಟಿ ಖಾದರ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ಕೊಟ್ಟು ಕೊರೋನಾ ನಿಯಂತ್ರಣದ ಕುರಿತು ಸಭೆಯನ್ನು ನಡೆಸಿದ್ದರು. ಇದಾದ ಬಳಿಕ ಇದೀಗ ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗಿದೆ.
ಹೀಗಾಗಿ ಇಂದು ಜಿಲ್ಲೆಯಲ್ಲಿ 50 ಸಾವಿರ ಜನರಿಗೆ ಲಸಿಕೆ ನೀಡುವ ಗುರಿಯನ್ನಿಟ್ಟುಕೊಂಡು ಲಸಿಕೆ ವಿತರಣೆ ಕಾರ್ಯ ಪ್ರಾರಂಭವಾಗಿದೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, 50 ಸಾವಿರಕ್ಕಿಂತ ಹೆಚ್ಚಿನ ವ್ಯಾಕ್ಸಿನ್ ನೀಡುವ ಗುರಿಯಿದೆ.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡನೇ ಡೋಸ್ ಹಾಗೂ ಕದ್ರಿ ಶಿವಭಾಗ್ ಇ.ಎಸ್.ಐ ಹಾಗೂ ಬೈಕಂಪಾಡಿಯ ಇ.ಎಸ್.ಐ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಎರಡನೇ ಡೋಸ್ ಮತ್ತು ಎನ್ ಆರ್ ಐ ಫಲಾನುಭವಿಗಳಿಗೆ ಕೋವಿಶೀಲ್ಡ್ ಎರಡನೇ ಡೋಸ್ ಲಸಿಕೆಯು ಜಿಲ್ಲಾ ವೆಸ್ಲಾಕ್ ಆಸ್ಪತ್ರೆಯಲ್ಲಿ ಲಭ್ಯವಿದೆ.
ಇನ್ನು ಪ್ರತೀ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಸಿಗಲಿದೆ.
Discussion about this post