ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಮಳೆಯಬ್ಬರದಿಂದ ಅಲ್ಲಲ್ಲಿ ಭೂಕುಸಿತವಾಗುತ್ತಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ. ಕೆಲ ದಿನಗಳ ಹಿಂದೆ ಕೊಡಕ್ಕಲ್ ಹಾಗೂ ಕುಲಶೇಖರ ಸಮೀಪ ರೈಲ್ವೆ ಟ್ರ್ಯಾಕ್ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ರೈಲು ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಇದೀಗ ಮಣ್ಣು ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ರೈಲು ಸಂಚಾರ ಪ್ರಾರಂಭವಾಗಿದೆ.
ಈ ನಡುವೆ ರೈಲು ಚಲಿಸುತ್ತಿದ್ದಾಗಲೇ ಏಕಾಏಕಿ ಗುಡ್ಡ ಕುಸಿದು ರೈಲು ಗಾರ್ಡ್ ಮೇಲೆ ಬಿದ್ದ ಘಟನೆ ವೀರಮಂಗಲ ಗಡಿಪಿಲ ಸಮೀಪದಲ್ಲಿ ನಡೆದಿದೆ. ಕಬಕ ಸುಬ್ರಹ್ಮಣ್ಯ ರೈಲ್ವೆ ಹಳಿಯಲ್ಲಿ ಮಂಗಳೂರು ಬೆಂಗಳೂರು ರೈಲು ಹಾದು ಹೋಗುವಾಗ ಈ ಘಟನೆ ನಡೆದಿದೆ.
ಘಟನೆಯಲ್ಲಿ ರೈಲ್ವೆ ಗಾರ್ಡ್ ಗೆ ಹಾನಿಯಾಗಿದ್ದು, ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಮಣ್ಣು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗ್ಗೆ 10.15ರ ಸುಮಾರಿಗೆ ಈ ಘಟನೆ ನಡೆದಿತ್ತು, ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಮಣ್ಣು ತೆರವುಗೊಳಿಸಿ, ರೈಲ್ವೆ ಹಳಿಯನ್ನು ಪರೀಕ್ಷಿಸಿದ ಬಳಿಕ ರೈಲ್ವೆ ಸಂಚಾರ ಎಂದಿನಂತೆ ಮುಂದುವರಿದಿದೆ.
Discussion about this post