ಮಂಡ್ಯದಲ್ಲಿ ಒಬ್ಬ ಸಿಎಂ ಪುತ್ರನನ್ನು ಗೆಲ್ಲಿಸಲು ದಳಪತಿಗಳ ದಂಡು ಸೇರಿತ್ತು. ಜೆಡಿಎಸ್ ಶಾಸಕರು, ಸಚಿವರು ರಾಜ್ಯದ ಬೇರೆ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ ಅನ್ನುವುದನ್ನು ಮರೆತು ಮಂಡ್ಯದಲ್ಲೇ ಬೇರೂರಿದ್ದರು.
ಆದರೆ ಮಂಡ್ಯದ ಪ್ರಜ್ಞಾವಂತ ಮತದಾರ ಎಚ್ಚರಿಕೆಯಿಂದ ಮತ ಚಲಾಯಿಸಿದ್ದಾನೆ. ನಮ್ಮೂರಲ್ಲಿ ಜೆಡಿಎಸ್ ಶಾಸಕರನ್ನು ಗೆಲ್ಲಿಸಿ ಪಾಠ ಕಲಿತಾಗಿದೆ. ಇನ್ನು ಸಂಸದರನ್ನಾಗಿ ನಿಮ್ಮವರನ್ನೇ ಆಯ್ಕೆ ಮಾಡಿದರೆ ಕಷ್ಟ ಎಂದು ಸುಮಲತಾ ಅಂಬರೀಶ್ ಅವರಿಗೆ ಸ್ವಾಭಿಮಾನದ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ.
ಆದರೆ ಸುಮಲತಾ ಅಂಬರೀಶ್ ಅವರನ್ನು ಸೋಲಿಸಲೇಬೇಕು ಎಂದು ಮೂವರು ಸುಮಲತಾ ಅವರನ್ನು ದಳಪತಿಗಳು ಕಣಕ್ಕಿಳಿಸಿದ್ದರು. ಆದರೆ ಅವರು ಸುಮಲತಾ ಅಂಬರೀಶ್ ಪಾಲಿಗೆ ಬರಬೇಕಾಗಿದ್ದ ಮತಗಳನ್ನು ಕಸಿದುಕೊಂಡಿದ್ದಾರೆ. ಆದರೆ ದಳಪತಿಗಳ ಇದೇ ಪ್ಲಾನ್ ಅವರಿಗೆ ಉಲ್ಟಾ ಹೊಡೆದಿದೆ. ನಿಖಿಲ್ ಖಾತೆ ಸೇರಬೇಕಾಗಿದ್ದ ಮತಗಳನ್ನು ಮತ್ತೊಬ್ಬ ಅಭ್ಯರ್ಥಿ ಸದ್ದಿಲ್ಲದೆ ಕಸಿದುಕೊಂಡಿದ್ದಾರೆ.ಅವರೇ ಶಶಿಕುಮಾರ್.
ಇದಕ್ಕೆ ಇಂಬು ನೀಡುವಂತೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು 18 ಸಾವಿರಕ್ಕೂ ಅಧಿಕ ಮತಗಳನ್ನು ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂಎಲ್ ಶಶಿಕುಮಾರ್ (ಕ್ರಮಸಂಖ್ಯೆ 17) ಎಂಬುವವರು 18323 ಮತಗಳನ್ನು ಗಳಿಸಿದ್ದಾರೆ.
ಈ ಬಾರಿ ಮಂಡ್ಯದಲ್ಲಿ ಒಟ್ಟು 16 ಮಂದಿ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈ ಪೈಕಿ ಸುಮಲತಾ ಅಂಬರೀಷ್ ಮತ್ತು ಶಶಿಕುಮಾರ್ ಅವರನ್ನು ಹೊರತು ಪಡಿಸಿ ಬೇರಾವುದೇ ಪಕ್ಷೇತರ ಅಭ್ಯರ್ಥಿಯ ಮತಗಳ ಸಂಖ್ಯೆ 10 ಸಾವಿರ ಗಡಿ ದಾಟಿಲ್ಲ.
ನಿಖಿಲ್ ಕುಮಾರ ಸ್ವಾಮಿ ಅವರ ಕ್ರಮ ಸಂಖ್ಯೆ 1 ಆಗಿದ್ದು, ಶಶಿಕುಮಾರ್ ಅವರ ಕ್ರಮ ಸಂಖ್ಯೆ 17 ಆಗಿದೆ. ಮೊದಲ ಮತ ಯಂತ್ರದಲ್ಲಿ 16 ಕ್ರಮ ಸಂಖ್ಯೆಗಳ ಬಳಿಕ ಮತ್ತೊಂದು ಮತಯಂತ್ರದಲ್ಲಿ 17ನೇ ಕ್ರಮ ಸಂಖ್ಯೆಯಿಂದ ಹೆಸರು ಜೋಡಣೆ ಮಾಡಲಾಗಿತ್ತು. ಆ ಮೂಲಕ ಶಶಿಕುಮಾರ್ ಅವರು 2ನೇ ಮತಯಂತ್ರದಲ್ಲಿ ಮೊದಲಿಗರಾಗಿದ್ದರು. ಇದೇ ಕಾರಣಕ್ಕೆ ಮತದಾರರು ಗೊಂದಲಗೊಂಡು ನಿಖಿಲ್ ಗೆ ಹಾಕಬೇಕಿದ್ದ ಮತಗಳನ್ನು ಶಶಿಕುಮಾರ್ ಅವರಿಗೆ ಹಾಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Discussion about this post