ಕೊಡಗಿನಲ್ಲಿ ಅಬ್ಬರಿಸಿದ ಮಳೆ ಮಾಡಿದ ಹಾನಿಗೆ ಲೆಕ್ಕವಿಲ್ಲ. ತೋಟ, ಸೂರು ಎಲ್ಲವನ್ನೂ ನೆರೆ ನುಂಗಿ ಹಾಕಿದೆ. ಬಡವ ಶ್ರೀಮಂತ, ಜಾತಿ ಧರ್ಮ ಅನ್ನುವ ಬೇಧ ತೋರದ ನೆರೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ.
ಕೊಡಗು ಮತ್ತೆ ಸಹಜ ಸ್ಥಿತಿಗೆ ಬರಲು ಎಷ್ಟು ವರ್ಷಗಳು ಬೇಕೋ ಗೊತ್ತಿಲ್ಲ.ಆದರೆ ಇದೀಗ ಸುರಿದಿರುವ ಮಳೆ, ಮದುವೆ ಕನಸನ್ನು ನುಚ್ಚು ನೂರು ಮಾಡಿದೆ.
ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ ರಾಟೆಮನೆ ಪೈಸಾರಿಯ ಬೇಬಿ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು.ದುಡಿದು ಕೂಡಿಟ್ಟ ಹಣದಲ್ಲಿ ಮಗಳು ಮಂಜುಳಾ ಮದುವೆ ನಡೆಸಲು ಅವರು ನಿರ್ಧರಿಸಿದ್ದರು ಕೇರಳದ ಹುಡುಗನೊಂದಿಗೆ ಮದುವೆ ಕೂಡಾ ನಿಗದಿಯಾಗಿತ್ತು. ಆಗಸ್ಟ್ 26ರಂದು ಮಕ್ಕಂದೂರಿನ ಹಾಲ್ ಕೂಡಾ ಬುಕ್ ಆಗಿತ್ತು.ಆಹ್ವಾನ ಪತ್ರಿಕೆ ಹಂಚಿಯಾಗಿದೆ.
ಆದರೆ ಸುರಿದಿರುವ ಮಳೆ ಮದುವೆ ಮಂಟಪವನ್ನು ನುಂಗಿದೆ. ಒಂದೆರೆಡು ದಿನದಲ್ಲಿ ಪರಿಸ್ಥಿತಿ ನೋಡಿ ಹೇಳುತ್ತೇವೆ ಎಂದು ಕೇರಳದ ಹುಡುಗರ ಮನೆಯವರಿಗೆ ತಿಳಿಸಲಾಗಿದೆ.
ಆದರೆ ಮಳೆ ಬಂತು ಎಂದು ಉಟ್ಟ ಬಟ್ಟೆಯಲ್ಲಿ ಬೇಬಿ ಮತ್ತು ಮಂಜುಳಾ ಹೊರ ಬಂದಿದ್ದಾರೆ. ಕೂಲಿ ಮಾಡಿ, ಸಾಲ ಮಾಡಿ ತೆಗೆದಿದ್ದ ಚಿನ್ನ, ಬಟ್ಟೆ ಬರೆ ಮನೆಯೊಳಗೆ ಇದೆಯೋ ಇಲ್ಲವೋ ಎಂದು ಗೊತ್ತಿಲ್ಲ.ಗಂಜಿ ಕೇಂದ್ರದಿಂದ ಮನೆಯತ್ತ ಹೋಗಿ ನೋಡಿದ ಮೇಲಷ್ಟೇ ಪರಿಸ್ಥಿತಿ ಗೊತ್ತಾಗಲಿದೆ ಅನ್ನುತ್ತಾರೆ ಬೇಬಿ.
ಇನ್ನು ಸರ್ಕಾರ ಸಹಾಯ ಮಾಡದಿದ್ದರೆ ಮದುವೆ ಮಾಡುವುದು ಕಷ್ಟ ಅನ್ನುವು ಬೇಬಿಗೆ ದನಿಗೂಡಿಸಿರುವ ಮಂಜುಳಾ ಪರಿಸ್ಥಿತಿ ನೋಡಿದರೆ ಮದುವೆಯೇ ಬೇಡ ಅನ್ನುತ್ತಾರೆ ಮಂಜುಳಾ.
ಇದು ಅವರ ಕಥೆಯಾದರೆ ಇದೇ ಊರಿನ ಸುಮಿತ್ರಾ ತಮ್ಮ ಮಗಳು ರಂಜಿತಾಳ ಮದುವೆಯನ್ನು ಸೆಪ್ಟಂಬರ್ 2 ರಂದು ನಿಶ್ಚಯ ಮಾಡಿದ್ದಾರೆ.
ಮಗಳ ಮದುವೆಗಾಗಿ ಕಾಫಿ ತೋಟದ ಮಾಲೀಕರಿಂದ ಸಾಲವನ್ನೂ ಕೂಡಾ ಪಡೆದಿದ್ದಾರೆ. ಆದರೆ ಇದೀಗ ಮಾಲೀಕರ ಕಾಫಿ ತೋಟ ಕೊಚ್ಚಿ ಹೋಗಿದೆ.
ಪ್ರವಾಹದೊಂದಿಗೆ ಮದುವೆಗೆ ಮಾಡಿಟ್ಟ ಚಿನ್ನಾಭರಣ, ಬಟ್ಟೆ ಬರೆ ಕೊಚ್ಚಿ ಕೊಂಡು ಹೋಗಿದೆ. ಮದುವೆಗಾಗಿ ಲಕ್ಷಗಟ್ಟಲೆ ಸಾಲ ಮಾಡಿರುವ ಕುಟುಂಬ ಈಗ ನೋಡಿರುವ ಕೇರ ಹುಡುಗ ಕೈ ಕೊಟ್ಟರೆ ಅನ್ನುವ ಆತಂಕದಲ್ಲಿದೆ. ಸರ್ಕಾರ ಸಹಾಯ ಹಸ್ತ ಚಾಚದಿದ್ದರೆ ಇವರ ಬದುಕು ಏನಾಗುತ್ತದೋ ಗೊತ್ತಿಲ್ಲ.
Discussion about this post