ಕಳೆದ ಹಲವು ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದ ಆಗಿರುವ ಹಾನಿಯನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಮಾಹಿತಿಯ ಪ್ರಕಾರ 8 ಮಂದಿ ಸಾವನ್ನಪ್ಪಿದ್ದಾರೆ. ನಾಪತ್ತೆಯಾದವರ ಸಂಖ್ಯೆ ಇನ್ನೂ ಲೆಕ್ಕಕ್ಕೇ ಸಿಕ್ಕಿಲ್ಲ.
ಈ ನಡುವೆ ಮಗನ ಕಣ್ಣ ಮುಂದೆಯೇ ತಾಯಿಯೊಬ್ಬಳು ಪ್ರವಾಹದಲ್ಲಿ ಕೊಚ್ಚಿ ಹೋದ ಘಟನೆಯೊಂದು ಬೆಳಕಿಗೆ ಬಂದಿದೆ.
ಹೆಬ್ಬಟ್ಟಗೇರಿಯಲ್ಲಿ ಮಿಟ್ಟು ಗಣಪತಿ ತನ್ನ ತಾಯಿ , ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ರೈತ ನಾಗಿರುವ ಗಣಪತಿ 6 ತಿಂಗಳ ಹಿಂದೆ ಹೊಸ ಮನೆ ಕಟ್ಟಿಸಿ ಅದರಲ್ಲೇ ಹೊಸ ಜೀವನ ಪ್ರಾರಂಭಿಸಿದ್ದರು. ಆದರೆ ಇವರ ಸಂತಸವನ್ನು ಕಂಡ ವಿಧಿ ಹೊಟ್ಟೆ ಕಿಚ್ಚು ಪಟ್ಟುಕೊಂಡಿತ್ತು. ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡಿದ್ದ ಇವರ ವಿಧಿ ಲಿಖಿತವೇ ಬೇರೆಯಾಗಿತ್ತು.
ಅದು ಆಗಸ್ಟ್ 15ರ ಮುಂಜಾನೆ. ಗಣಪತಿ ಕುಟುಂಬ ಸಮೇತರಾಗಿ ಉಪಹಾರ ಸೇವಿಸುತ್ತಿದ್ದರು. ಆ ವೇಳೆ ವ್ಯಕ್ತಿಯೊಬ್ಬರು ಬಂದು ಮಡಿಕೇರಿಗೆ ಹೋಗುವ ದಾರಿ ತೋರಿಸಿ ಎಂದು ಗಣಪತಿ ಅವರಿಗೆ ಕೇಳಿದ್ದಾನೆ. ಈ ವೇಳೆ ದೊಡ್ಡ ಶಬ್ದ ಕೇಳಿಸಿದೆ. ಕ್ಷಣ ಮಾತ್ರದಲ್ಲಿ ದೂರದಲ್ಲಿ ಮರವೊಂದು ಬೀಳುತ್ತಿರುವುದು ಕಾಣಿಸಿದೆ. ಅಷ್ಟೇ ಭೂಕುಸಿತ ಪ್ರಾರಂಭವಾಯ್ತು. ಮುಂದೆ ಹೆಜ್ಜೆ ಇಡದಂತ ಪರಿಸ್ಥಿತಿ. ಗಣಪತಿ ಅವರ ತಾಯಿ ಮಿನ್ನಂಡ ಉಮ್ಮವ್ವ ಕೆಳಗಿನ ಮನೆಯಲ್ಲಿದ್ದರು. ಭೂಕುಸಿತ ಕ್ಷಣ ಮಾತ್ರದಲ್ಲಿ ಆಕೆಯನ್ನು ಎಳೆದುಕೊಂಡಿತು. ಎರಡು ಕೈಗಳನ್ನು ಮೇಲೆತ್ತಿ ಮಗ ಕಾಪಾಡು ಎಂದು ಕರೆದರು.ಗಣಪತಿ ತಾಯಿ ರಕ್ಷಣೆಗೆ ಧಾವಿಸುವಷ್ಟರ ಹೊತ್ತಿಗೆ ಭೂ ಕುಸಿತದ ಮಣ್ಣಿನ ಜೊತೆ ಕೊಚ್ಚಿ ಹೋಗಾಗಿತ್ತು.
ತಾಯಿಯನ್ನು ಕಳೆದುಕೊಂಡಿರುವ ಕುರಿತಂತೆ ಮಾತನಾಡಿರುವ ಗಣಪತಿ ಭೂಕುಸಿತದ ಅವಶೇಷಗಳಡಿ ಸಿಲುಕಿದ ಆಕೆ ಸಹಾಯ ಮಾಡುವಂತೆ ಕೈ ಬೀಸುತ್ತಿದ್ದಳು, ಆಕೆ ನನ್ನ ಕಣ್ಣುಮುಂದೆ ಕೊಚ್ಚಿಹೋಗುತ್ತಿದ್ದರೂ ನಾನು ಏನು ಮಾಡಲಾಗದ ಅಸಹಾಯಕನಾಗಿದ್ದೆ. ಈಗ್ಲೂ ತಾಯಿ ಕೈ ಎತ್ತಿ ಕಾಪಾಡು ಎಂದು ಕೇಳಿದ ದೃಶ್ಯ ಕಣ್ಣ ಮುಂದಿದೆ ಎಂದು ಕಣ್ಣೀರು ಹಾಕಿದರು.
Discussion about this post