ಬೆಂಗಳೂರು : ರಾಜಕೀಯ ಮೌಲ್ಯಗಳು, ಕಾರ್ಯಕರ್ತರ ಶ್ರಮಕ್ಕೆ ಪಕ್ಷದಿಂದ ಗೌರವ ಎಲ್ಲವೂ ಇದೀಗ ನಗಣ್ಯ. ಕಾಸಿದ್ದವನೇ ಬಾಸು ಅನ್ನುವುದು ಇತ್ತೀಚಿನ ಚುನಾವಣೆಗಳಲ್ಲಿ ಸಾಬೀತಾಗಿದೆ. ಅದೇ ರೀತಿ ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲೂ ಕೋಟಿ ಕೋಟಿ ಕುಬೇರರಿಗೆ ಬಹುತೇಕ ಎಲ್ಲಾ ಪಕ್ಷಗಳು ಮಣೆ ಹಾಕಿವೆ.
ಆ ಪೈಕಿ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನೇ ಮೀರಿಸುವ ಆಸ್ತಿ ಹೊಂದಿರುವ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ. ಅಚ್ಚರಿ ಅಂದ್ರೆ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆಜಿಎಫ್ ಬಾಬು ಖ್ಯಾತಿಯ ಯೂಸೂಫ್ ಷರೀಫ್ ರಾಜ್ಯ ರಾಜಕಾರಣದಲ್ಲಿ ಅತಿ ಶ್ರೀಮಂತ ರಾಜಕಾರಣಿ ಎಂದೇ ಹೆಸರು ಮಾಡಿರುವ ಸಚಿವ ಎಂಟಿಬಿ ನಾಗರಾಜ್ ಅವರನ್ನು ಮೀರಿಸುವ ಆಸ್ತಿ ಹೊಂದಿದ್ದಾರೆ.
97.98 ಕೋಟಿ ರೂ. ಮೌಲ್ಯದ ಚರಾಸ್ತಿ, 1643.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 1,741.57 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿರುವ ಯೂಸೂಫ್ ಷರೀಫ್ ಅವರ ವ್ಯವಹಾರ ಲೋಕ ನೋಡಿದರೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಕಾಂಚಾಣದ ಸದ್ದಿನ ಮುನ್ಸೂಚನೆ ಸ್ಪಷ್ಟವಾಗಿ ಸಿಕ್ಕಿದೆ.ಯೂಸುಫ್ ಷರೀಫ್ ಬಳಿ 100 ಕೋಟಿ ರೂ.ಗೂ ಹೆಚ್ಚು ಮೊತ್ತದ ಚರಾಸ್ತಿಯಿದ್ದು, ಮೊದಲ ಹೆಂಡತಿ ಬಳಿ 98.96 ಲಕ್ಷ ರೂ., ಎರಡನೇ ಹೆಂಡತಿ ಬಳಿ 32.22 ಲಕ್ಷ ರೂ., ಪುತ್ರಿ ಬಳಿ 66.36 ಲಕ್ಷ ರೂ. ಹಾಗೂ ಪುತ್ರನ ಬಳಿ 11.57 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ.
ಇನ್ನು ಸ್ಥಿರಾಸ್ತಿ ಲೆಕ್ಕಕ್ಕೆ ಬರುವುದಾದ್ರೆ ಯೂಸುಫ್ ಹೆಸರಿನಲ್ಲಿ 47.31 ಕೋಟಿ ರೂ. ಮೌಲ್ಯದ ಎರಡು ಕೃಷಿ ಭೂಮಿ, ಮೊದಲ ಪತ್ನಿ ಹೆಸರಿನಲ್ಲಿ 1.30 ಕೋಟಿ ರೂ. ಮೌಲ್ಯದ ಕೃಷಿ ಭೂಮಿ, 1593.27 ಕೋಟಿ ರೂ. ಮೊತ್ತದ ಕೃಷಿಯೇತರ ಜಮೀನು ಹೀಗೆ ಒಟ್ಟು 26 ಜಮೀನುಗಳನ್ನು ಅವರು ಹೊಂದಿದ್ದಾರೆ. ಇನ್ನು ಅವರ ಮನೆ ನಿವೇಶನದ ಮೌಲ್ಯ 3.01 ಕೋಟಿ ರೂಪಾಯಿ.ವಾಹನಗಳ ಲೆಕ್ಕಕ್ಕೆ ಬಂದ್ರೆ ಕೆಜಿಎಫ್ ಬಾಬು, 2.99 ಕೋಟಿ ರೂ. ಮೌಲ್ಯದ ವಾಹನವನ್ನು ಹೊಂದಿದ್ದು, 2.01 ಕೋಟಿ ರೂ. ಬೆಲೆಯ ಒಂದು ರೋಲ್ಸ್ ರಾಯ್ಸ್ ಕಾರು, ಎರಡು ಫಾರ್ಚ್ಯೂನರ್ ಕಾರುಗಳು ಅವರಲ್ಲಿದ್ದು ಮೊದಲ ಪತ್ನಿ 1.65 ಲಕ್ಷ ರೂ. ಮೌಲ್ಯದ ವಾಹನದೊಂದಿಗೆ ಎರಡು ಟೂವೀಲ್ಹರ್ ಕೂಡಾ ಹೊಂದಿದ್ದಾರೆ.
ಚಿನ್ನಾಭರಣಗಳ ಲೆಕ್ಕಕ್ಕೆ ಬಂದ್ರೆ ಷರೀಫ್ ಬಳಿ 2.19 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರಾಭರಣ, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ವಸ್ತುಗಳಿವೆ. ಮೊದಲ ಪತ್ನಿ ಬಳಿ 77.15 ಲಕ್ಷ ರೂ., ಎರಡನೇ ಪತ್ನಿ ಬಳಿ 30.37 ಲಕ್ಷ ರೂ., ಪುತ್ರಿ ಬಳಿ 58.73 ಲಕ್ಷ ರೂ. ಮೌಲ್ಯದ ಆಭರಣಗಳಿವೆ ಎಂದು ಅವರ ಅಫಿಡವಿತ್ ನಲ್ಲಿ ಹೇಳಿಕೊಂಡಿದ್ದಾರೆ.ಇನ್ನು ಇಷ್ಟೆಲ್ಲಾ ಆಸ್ತಿಗಳ ಒಡೆಯ ಯೂಸುಫ್ ಷರೀಫ್ 58.12 ಕೋಟಿ ರೂ.ವನ್ನು ಇತರರಿಗೆ ಸಾಲವಾಗಿ ನೀಡಿದ್ದಾರೆ.
ಈ ಆಸ್ತಿಯನ್ನು ನೋಡಿಯೇ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ ಅನ್ನುವುದು ರಾಜಕೀಯ ಪಡಸಾಲೆಯ ಮಾತು. ಮುಂದಿನ ಚುನಾವಣೆಗೆ ತನು ಮನ ಧನದಿಂದ ದುಡಿಯುವ ವ್ಯಕ್ತಿಗೆ ಕಾಂಗ್ರೆಸ್ ಬೇಕಾಗಿದ್ದಾರೆ, ಹೀಗಾಗಿಯೇ ಅವರನ್ನು ವಿಧಾನ ಪರಿಷತ್ ಗೆ ಕಳುಹಿಸಲು ಕಾಂಗ್ರೆಸ್ ಮನಸ್ಸು ಮಾಡಿದೆಯಂತೆ.
Discussion about this post