ಕೇರಳದ ಮುಸ್ಲಿಂ ಎಜುಕೇಷನ್ ಸೊಸೈಟಿ (ಎಂಇಎಸ್) ತನ್ನ ಶಾಲೆ, ಕಾಲೇಜುಗಳ ಆವರಣದಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಿದೆ.
ಕೋಝಿಕ್ಕೋಡ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಂಇಎಸ್ ಕೇರಳದಾದ್ಯಂತ 150ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ (2019-20) ಜಾರಿಗೆ ಬರುವಂತೆ ತನ್ನೆಲ್ಲ ಶಾಲೆ, ಕಾಲೇಜುಗಳ ಆವರಣದಲ್ಲಿ ಮುಸ್ಲಿಂ ಬಾಲಕಿಯರು ಮತ್ತು ತರುಣಿಯರು ಬುರ್ಖಾ ಧರಿಸುವುದನ್ನು ನಿಷೇಧಿಸಿ ಆದೇಶಿಸಿದೆ.
ನಾವು ಕೇರಳ ಇಸ್ಲಾಂ ಧರ್ಮವನ್ನು ಪಾಲಿಸೋಣ. ಮಧ್ಯಪ್ರಾಚ್ಯ ಇಸ್ಲಾಂ ಧರ್ಮದ ನೀತಿನೇಮಗಳನ್ನಲ್ಲ. ಸಂಪ್ರದಾಯವಾದಿ ಮುಸ್ಲಿಂ ಗುಂಪುಗಳು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ ಐದು ವರ್ಷಗಳಿಂದ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿವೆ. ಈ ಪಿಡುಗನ್ನು ನಿಯಂತ್ರಿಸಲು ಈಗ ನಿರ್ಧರಿಸಿದ್ದೇವೆ.
ಈಗ ಬಾಲಕಿಯರು ಮತ್ತು ತರುಣಿಯರಿಗೆ ಸಲ್ವಾರ್ ಮತ್ತು ಕಮೀಜ್ನ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲು ಮುಂದಾಗಿದ್ದೇವೆ. ಧರಿಸುವ ಉಡುಪು ಸಭ್ಯವಾಗಿರಬೇಕು. ಮುಖವನ್ನು ಮುಚ್ಚಿಕೊಳ್ಳುವ ಯಾವುದೇ ಬಟ್ಟೆಗಳನ್ನು ಧರಿಸುವ ಅವಶ್ಯಕತೆ ಇಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ವೃತ್ತಿಯಲ್ಲಿ ವೈದ್ಯರಾಗಿರುವ ಎಂಇಎಸ್ ಅಧ್ಯಕ್ಷ ಫಜಲ್ ಗಫೂರ್ ಕಳೆದ ತಿಂಗಳು ಈ ಆದೇಶವನ್ನು ಹೊರಡಿಸಿದ್ದು, ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳ ವರ್ಗಗಳೆರಡಕ್ಕೂ ಈ ಆದೇಶ ಅನ್ವಯವಾಗಲಿದೆ.
ಈ ಆದೇಶಕ್ಕೆ ಕೇರಳದ ಮುಸ್ಲಿಂ ಸಂಘಟನೆ, ಕೇರಳ ಜಮೈತುಲ್ಲಾ ಉಲ್ಲಮಾ ಎಂಇಎಸ್ ಅಧ್ಯಕ್ಷರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದೆ. ಬುರ್ಖಾ ಧರಿಸುವುದು ಧಾರ್ಮಿಕ ವಿಚಾರ. ಈ ಕುರಿತು ನಿರ್ಧಾರ ಕೈಗೊಳ್ಳಲು ಧಾರ್ಮಿಕ ಸಂಸ್ಥೆಗಳಿಗೆ ಮಾತ್ರವೇ ಅಧಿಕಾರವಿದೆ ಎಂದಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಸಂಘಟನೆಗಳು ಕೈ ತೂರಿಸುವುದು ಅಪಾಯಕಾರಿ. ಇದು ಹಲವು ಸಾಬೀತಾಗಿದೆ. ಹೀಗಾಗಿ ಶಾಲಾ ಆಡಳಿತ ಮಂಡಳಿಗೆ ವಿರೋಧ ವ್ಯಕ್ತಪಡಿಸುವ ಅಧಿಕಾರ ಫೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸೇರಿದ್ದು ಅನ್ನುವುದು ಪ್ರಜ್ಞಾವಂತರ ಅಭಿಪ್ರಾಯ.
ಇದೇ ಫಜಲ್ ಗಫೂರ್ ಈ ಹಿಂದೆ ನಿಕ್ಯಾಬ್ ಧರಿಸುವುದಕ್ಕೂ ವಿರೋಧ ವ್ಯಕ್ತಪಡಿಸಿದ್ದರು. ಅದೊಂದು ಪಾಶ್ಚಿಮಾತ್ಯ ಸಂಸ್ಕೃತಿಯಾಗಿದೆ. ನಾವು ಅದನ್ನು ಆಮದು ಮಾಡಿಕೊಂಡಿದ್ದೇವೆ. ಇದನ್ನು ಧರಿಸುವುದರಿಂದ ಸೂರ್ಯನ ಕಿರಣಗಳು ಮುಸ್ಲಿಂ ಮಹಿಳೆಯರಿಗೆ ದೇಹ ಸ್ಪರ್ಶಿಸುವುದಿಲ್ಲ. ಇದರಿಂದ ಮುಸ್ಲಿಂ ಮಹಿಳೆಯರಲ್ಲಿ ವಿಟಮಿನ್ ಕೊರತೆ ಎದುರಾಗುತ್ತದೆ ಎಂದಿದ್ದರು.
2014 ರಲ್ಲಿ ಕೊಟ್ಟ ಹೇಳಿಕೆ ಕೇರಳದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಅವರು ತಮ್ಮ ಹೇಳಿಕೆಯಿಂದ ಹಿಂದೆ ಸರಿದಿರಲಿಲ್ಲ. ಬದಲಾಗಿ ಇದು ತಾಲಿಬಾನ್ ಹಿಡಿತದ ಅಫಘಾನಿಸ್ತಾನವಲ್ಲ. ವಾಕ್ ಸ್ವಾತಂತ್ರ್ಯ ಹೊಂದಿರುವ ಭಾರತ. ಸಂಪ್ರದಾಯ ಕುರಿತಂತೆ ಹೇಳಿಕೆ ಕೊಡುವ ಅಧಿಕಾರ ನನಗಿದೆ ಅಂದಿದ್ದರು.
Discussion about this post