ತಿರುವನಂತಪುರ : ಕೊರೋನಾ ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲಿ ಕೇರಳ ಅದನ್ನು ನಿಭಾಯಿಸಿದ ರೀತಿ ಇಡೀ ವಿಶ್ವದ ಗಮನ ಸೆಳೆದಿತ್ತು. ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವ ಮೊದಲೇ ಎಚ್ಚೆತ್ತುಕೊಂಡ ಕೇರಳ ಸರ್ಕಾರ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿತ್ತು. ಹೀಗಾಗಿ ಕೇರಳದ ಹೆಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸಿತ್ತು.
ಈ ವೇಳೆ ಕೇರಳದಲ್ಲಿ ಕೊರೋನಾ ನಿಯಂತ್ರಣ ಸಾಧ್ಯವಾಗಿಸಿದವರು ಆರೋಗ್ಯ ಸಚಿವೆಯಾಗಿದ್ದ ಕೆಕೆ ಶೈಲಜಾ. ಶೈಲಜಾ ಟೀಚರ್ ಎಂದೇ ಹೆಸರು ವಾಸಿಯಾಗಿರುವ ಅವರು ಕೊರೋನಾ ಸಂದರ್ಭದಲ್ಲಿ ಹತ್ತು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿಕೊಂಡಿದ್ದರು. ಇಷ್ಟೆಲ್ಲಾ ಕಠಿಣ ಕ್ರಮಗಳನ್ನು ಕೈಗೊಂಡರೂ ಓಣಂ ಸಂದರ್ಭದಲ್ಲಿ ಜನ ಮಾಡಿದ ಯಡವಟ್ಟು, ಇಡೀ ಪ್ರಯತ್ನವನ್ನು ನೀರಿನಲ್ಲಿ ಇಟ್ಟ ಹೋಮದಂತಾಗಿಸಿತ್ತು. ಆದರೂ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕೇರಳದ ಕೊರೋನಾ ನಿಯಂತ್ರಣ ಕ್ರಮಗಳನ್ನು ಮೆಚ್ಚಲೇಬೇಕು.
ಈ ಹಿಂದೆ ನಿಫಾ ವೈರಸ್ ಬಂದ ಸಂದರ್ಭದಲ್ಲಿ ಆದ ಅನುಭವಗಳಿಂದ ಕೊರೋನಾ ನಿಯಂತ್ರಣ ಸಾಧ್ಯವಾಯ್ತು ಅಂದಿದ್ದರು ಶೈಲಜಾ ಟೀಚರ್.
ಇನ್ನು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 60 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದ ಶೈಲಜಾ ಟೀಚರ್ ಈ ಬಾರಿಯ ಪಿಣರಾಯಿ ಸಂಪುಟದಲ್ಲಿ ಮತ್ತೆ ಆರೋಗ್ಯ ಸಚಿವೆಯಾಗ್ತಾರೆ ಎಂದು ಹೇಳಲಾಗಿತ್ತು.. ಆದರೆ ಮಾಹಿತಿಗಳ ಪ್ರಕಾರ ಶೈಲಜಾ ಅವರನ್ನು ಹೊರಗಿಟ್ಟು ಸಂಪುಟ ರಚಿಸಲು ಪಿಣರಾಯಿ ನಿರ್ಧರಿಸಿದ್ದಾರಂತೆ.
ಮುಂದಿನ ಸಿಎಂ ಎಂದೇ ಶೈಲಜಾ ಟೀಚರ್ ಬಿಂಬಿತರಾಗಿರುವ ಹಿನ್ನಲೆಯಲ್ಲಿ ಪಿಣರಾಯಿ ವಿಜಯನ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಜೊತೆಗೆ ಈ ಬಾರಿ ಕೇರಳ ಕ್ಯಾಬಿನೆಟ್ ನಲ್ಲಿ ಸಿಎಂ ಒಬ್ಬರನ್ನು ಹೊರತುಪಡಿಸಿ ಮತ್ತೆಲ್ಲಾ ಹೊಸ ಮುಖಗಳಿಗೆ ಸ್ಥಾನ ಕಲ್ಪಿಸಲು ನಿರ್ಧರಿಸಲಾಗಿದೆ ಅನ್ನುವ ಮಾಹಿತಿಯೂ ಲಭ್ಯವಾಗಿದೆ.
Discussion about this post