ಕಾರ್ಯಕರ್ತರ ಒತ್ತಡ ತಡೆಯಲಾಗಲಿಲ್ಲ, ಹೀಗಾಗಿ ಅನಿತಾ ಸ್ಪರ್ಧಿಸಬೇಕಾಯ್ತು ಎಂದು ಕುಮಾರಸ್ವಾಮಿಯವರು ಹೇಳಿದರೂ ಅಚ್ಚರಿ ಇಲ್ಲ
ಬೆಂಗಳೂರು : ಕುಟುಂಬ ರಾಜಕಾರಣದ ಆರೋಪದಿಂದ ಬಳಲುತ್ತಿರುವ ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ತಂತ್ರ ರೂಪಿಸುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಜೆಡಿಎಸ್ ನಾಯಕರ ತಪ್ಪು ಹೆಜ್ಜೆಗಳೇ ಮುಳುವಾಗುವ ಸಾಧ್ಯತೆಗಳಿದೆ. ಈಗಾಗಲೇ ಹಿರಿಯ ಮುಖಂಡರು ಪಕ್ಷ ತೊರೆಯುತ್ತಿದ್ದು, ಗೆಲ್ಲುವ ಕುದುರೆಗಳಿಗಾಗಿ ದಳಪತಿಗಳು ಹುಡುಕಾಡುವಂತಾಗಿದೆ. ಜೊತೆಗೆ ಕುಮಾರಸ್ವಾಮಿಯವರು ಯಾವುದೇ ರಾಜಕೀಯ ಹೇಳಿಕೆಗಳಿಗೆ ಬದ್ಧರಾಗಿರೋದಿಲ್ಲ, ಹೀಗಾಗಿ ಅವರನ್ನು ನಂಬುವ ಸ್ಥಿತಿಯಲ್ಲೂ ಜನರಿಲ್ಲ.
ಈ ನಡುವೆ ಮುಂದಿನ ಚುನಾವಣೆಯಲ್ಲಿ ಶಾಸಕಿಯಾಗಿರುವ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದಿಲ್ಲ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಕನ್ನಡ ಸಂಘಟನೆಗಳೊಂದಿಗೆ ಸಭೆ ನಡೆಸಿದ ವೇಳೆ ಈ ಘೋಷಣೆಯನ್ನು ಮಾಡಿದ್ದಾರೆ.
ಕನ್ನಡ ಮನಸ್ಸುಗಳ ಮುಕ್ತಮಾತುಕತೆ ಅನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷ ಉಳಿಸಿಕೊಳ್ಳಲು ಅನಿವಾರ್ಯವಾಗಿ ಅನಿತಾ ಅವರನ್ನು ಕಣಕ್ಕಿಳಿಸಬೇಕಾಯ್ತು. ಹಾಗಂತ ಮುಂದಿನ ಚುನಾವಣೆಯಲ್ಲಿ ಅವರನ್ನು ಕಣಕ್ಕಿಳಿಸುವುದಿಲ್ಲ ಅಂದಿದ್ದಾರೆ. ಹಾಗಂತ ಕುಮಾರಸ್ವಾಮಿಯವರ ಈ ಮಾತನ್ನು ಖಂಡಿತಾ ನಂಬುವ ಹಾಗಿಲ್ಲ. ಚುನಾವಣೆ ಹತ್ತಿರ ಬಂದ ವೇಳೆ ಕಾರ್ಯಕರ್ತರ ಒತ್ತಡ ತಡೆಯಲಾಗಲಿಲ್ಲ, ಹೀಗಾಗಿ ಅನಿತಾ ಸ್ಪರ್ಧಿಸಬೇಕಾಯ್ತು ಎಂದು ಕುಮಾರಸ್ವಾಮಿಯವರು ಹೇಳಿದರೂ ಅಚ್ಚರಿ ಇಲ್ಲ.
ಇದಕ್ಕೆ ಪೂರಕ ಅನ್ನುವಂತೆ ಜೆಡಿಎಸ್ ವರಿಷ್ಠ ದೇವೇಗೌಡರು ಮಾತನಾಡಿದ್ದು, ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಮುಂಬರುವ ಚುನಾವಣೆಯಲ್ಲಿ ರಾಮನಗರ, ಚನ್ನಪಟ್ಟಣದಲ್ಲಿ ಯಾರು ಸ್ಪರ್ಧಿಸಬೇಕು ಅನ್ನುವು ವಿಚಾರದಲ್ಲಿ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಅಂದಿದ್ದಾರೆ.
Discussion about this post