ಬೆಂಗಳೂರು : ಮೂರನೇ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಡೆದುಕೊಂಡ ರೀತಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಒಂದು ಹೆಜ್ಜೆ ಮುಂದೆ ಹೋಗಿದ್ದ ಕಾಂಗ್ರೆಸ್, ನಮ್ಮ ಮೇಕೆದಾಟು ಪಾದಯಾತ್ರೆಯನ್ನು ತಡೆಲು ರಾಜ್ಯ ಸರ್ಕಾರ ಮಾಡುತ್ತಿರುವ ನಾಟಕ ಎಂದು ಟೀಕಿಸಿತ್ತು. ರಾಜ್ಯ ಸರ್ಕಾರದ ನಡೆ ನೋಡಿದರೆ ಕಾಂಗ್ರೆಸ್ ಹೇಳುವುದರಲ್ಲಿ ಸತ್ಯಾಂಶವಿದೆ ಅನ್ನಿಸುತ್ತಿದೆ.
ಮೂರನೇ ಅಲೆ ಪ್ರಾರಂಭವಾಗುತ್ತಿದೆ ಅನ್ನುವ ಹೊತ್ತಿಗೆ ಶಾಲಾ ಕಾಲೇಜು ಬಂದ್, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಅಂದಿದ್ದ ಸರ್ಕಾರ, ಈಗ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ಸಾವಿನ ಸಂಖ್ಯೆಯೂ ದಿನದಿಂದ ಹೆಚ್ಚಾಗುತ್ತಿದೆ ಅನ್ನುವ ಹೊತ್ತಿಗೆ ವೀಕೆಂಡ್ ಕರ್ಫ್ಯೂ ಸಡಿಲಗೊಳಿಸಲು ಮುಂದಾಗಿದೆ.
ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ ಸಭೆ ಕರೆದಿದ್ದು, ತಜ್ಞರು ಹಾಗೂ ಸಚಿವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಹಿತಿಗಳ ಪ್ರಕಾರ ವಾರಾಂತ್ಯ ಕರ್ಫ್ಯೂ ತೆರವುಗೊಳಿಸಿ, ನೈಟ್ ಕರ್ಫ್ಯೂ ಅವಧಿಯನ್ನು ಕಡಿತಗೊಳಿಸುವ ಸಾಧ್ಯತೆಗಳಿದೆ. ಜೊತೆಗೆ ಬೆಂಗಳೂರಿನಲ್ಲಿ 5 ರಿಂದ 9ನೇ ತರಗತಿ ತನಕ ಶಾಲೆ ಪ್ರಾರಂಭಿಸುವುದು, ಸಿನಿಮಾ, ಮಾಲ್, ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಶೇ 50ರಷ್ಟು ಆಸನ ಮಿತಿ, ಜಿಮ್, ಈಜುಕೊಳ ಮುಕ್ತ ಕುರಿತ ತೀರ್ಮಾನ ಹೊರಬರುವ ಸಾಧ್ಯತೆಗಳಿದೆ.
ಈ ನಡುವೆ ಜೀವ, ಜೀವನ ಎರಡೂ ಮುಖ್ಯ ಅನ್ನುವ ಹಳೆ ಡೈಲಾಗ್ ಹೊಡೆಯಲಾರಂಭಿಸಿರುವ ಬೊಮ್ಮಾಯಿ ಸಂಪುಟದ ಸಚಿವರು, ಜನ ಪರ ತೀರ್ಮಾನ ಇಂದಿನ ಸಭೆಯಲ್ಲಿ ಖಚಿತ ಅಂದಿದ್ದಾರೆ. ಹಾಗೇ ನೋಡಿದರೆ ಇದು ಜನಾಕ್ರೋಶಕ್ಕೆ ಮಣಿದು ಹೊರ ಬರುವ ತೀರ್ಮಾನವಲ್ಲ. ಬದಲಾಗಿ ಬಿಜೆಪಿ ನಾಯಕರಾದ ಸಿಟಿ ಕವಿ, ಪ್ರಹ್ಲಾದ್ ಜೋಶಿ, ಪ್ರತಾಪ್ ಸಿಂಹ ಸೇರಿ ಅನೇಕ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಸರ್ಕಾರ ವೀಕೆಂಡ್ ಕರ್ಫ್ಯೂ ತೆರವಿಗೆ ಮುಂದಾಗಿದೆ.
Discussion about this post