ಬೆಂಗಳೂರು : ಕೊರೋನಾ ಸೋಂಕು ಗೆದ್ದೆವು ಅನ್ನುವಷ್ಟರಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರಿ ವೈರಸ್ ಮೂರನೇ ಅಲೆಯ ಭಯ ಹುಟ್ಟಿಸಿದೆ. ಈಗಾಗಲೇ ಬ್ರಿಟನ್ ನಲ್ಲಿ ಒಮಿಕ್ರೋನ್ 3 ದಿನಕ್ಕೊಮ್ಮೆ ಡಬಲ್ ಆಗುತ್ತಿದೆಯಂತೆ. ಪ್ರತೀ ನಿತ್ಯ 2 ಲಕ್ಷ ಜನರಿಗೆ ಸೋಂಕು ತಗುಲುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮಾಹಿತಿಗಳ ಪ್ರಕಾರ ಬ್ರಿಟನ್ ನಲ್ಲಿ 4713 ಒಮಿಕ್ರೋನ್ ಕೇಸುಗಳಿದ್ದು, 250 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ಭಾರತದಲ್ಲೂ ಒಮಿಕ್ರೋನ್ ಪ್ರಕರಣಗಳು ಏರಲಾರಂಭಿಸಿದೆ. ಮಂಗಳವಾರ ಒಂದೇ ದಿನ 19 ಪ್ರಕರಣಗಳು ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಒಮಿಕ್ರೋನ್ ಸೋಂಕಿತರ ಸಂಖ್ಯೆ 61ಕ್ಕೆ ಏರಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 8, ದೆಹಲಿಯಲ್ಲಿ 4, ರಾಜಸ್ಥಾನದಲ್ಲಿ 7 ಒಮಿಕ್ರೋನ್ ಪ್ರಕರಣಗಳು ಪತ್ತೆಯಾಗಿದೆ. ಮಹಾರಾಷ್ಟ್ರದ ಹೊಸ ಸೋಂಕಿತರಿಗೆ ಯಾವುದೇ ವಿದೇಶಿ ಪ್ರಯಾಣದ ಇತಿಹಾಸವಿಲ್ಲ, ಜೊತೆಗೆ ಮಹಾರಾಷ್ಟ್ರದಲ್ಲಿ ಒಮಿಕ್ರೋನ್ ಸೋಂಕಿತರ ಸಂಖ್ಯೆ 28ಕ್ಕೆ ಏರಿದೆ.
ಈ ನಡುವೆ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಮರಣ ಪ್ರಮಾಣ ಏಕಾಏಕಿ ಏರಿಕೆಯಾಗಿದೆ. ಕಳೆದ 2 ದಿನಗಳಿಂದ ಕೊರೋನಾದಿಂದ ಮರಣವಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗಿದ್ದು, ಮಂಗಳವಾರ 263 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು 7 ಮಂದಿ ಬಲಿಯಾಗಿದ್ದಾರೆ.
Discussion about this post