ಮುಂದಿನ ಚುನಾವಣೆಯಲ್ಲಿ ಹೇಗಾದರು ಸರಿ ಅಧಿಕಾರ ಹಿಡಿಯಲೇಬೇಕು ಎಂದು ಪಣತೊಟ್ಟಿರುವ ಕುಮಾರಸ್ವಾಮಿ, ಜನತಾ ಪರ್ವ 1.O, ಮಿಷನ್ 123 ಗುರಿಯೊಂದಿಗೆ ಜೆಡಿಎಸ್ ಸಂಘಟನಾ ಕಾರ್ಯಗಾರ ಹಮ್ಮಿಕೊಂಡಿದ್ದಾರೆ.
ಬಿಡದಿಯ ತೋಟದಲ್ಲಿ ಆಯೋಜಿಸಲಾಗಿರುವ ಕಾರ್ಯಾಗಾರದಲ್ಲಿ ರಾಜ್ಯದಲ್ಲಿ ಕಾರ್ಯಕರ್ತರ ಪಡೆಗೆ ಹೊಸ ಹುಮ್ಮಸ್ಸು ತುಂಬುವ ಕೆಲಸ ನಡೆಯುತ್ತಿದೆ. ದಳಪತಿಗಳ ಯೋಜನೆ ಚೆನ್ನಾಗಿದೆ. ಆದರೆ ಗ್ರಾಮಪಂಚಾಯತ್ ಚುನಾವಣೆ ಸಂದರ್ಭದಲ್ಲೇ ಈ ಕೆಲಸ ನಡೆಯುತ್ತಿರುತ್ತಿದ್ರೆ ಇನ್ನು ಪರಿಣಾಮಕಾರಿಯಾಗಿರುತ್ತಿತ್ತು. ಜೊತೆಗೆ ಜೆಡಿಎಸ್ ಪಕ್ಷಕ್ಕೆ ಕುಟುಂಬ ರಾಜಕಾರಣದ ಕಳಂಕ ಅಂಟಿಕೊಂಡಿದ್ದು ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.
ಈ ನಡುವೆ ಕಾರ್ಯಾಗಾರದ 3ನೇ ದಿನ ಮಹಿಳಾ ಗೋಷ್ಠಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಚಾಲನೆ ನೀಡಿ ಜೆಡಿಎಸ್ ನಾಯಕರಿಗೆ ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಹೆಣ್ಣು ಮಕ್ಕಳಿಗೆ ಉಚಿತ ಚಿಕಿತ್ಸೆ, ಬಡವರ ಬಂಧುವಿನಂತಹ ಯೋಜನೆಗಳು ಮತ್ತಷ್ಟು ಘೋಷಣೆಯಾಗಬೇಕು ಎಂದು ಒತ್ತಾಯಿಸಿದರು.
ಆದರೆ ಅನಿತಾ ಕುಮಾರಸ್ವಾಮಿಯವರ ಭಾಷಣ ಕೇಳಿದ್ರೆ ದಳಪತಿಗಳ ರೀತಿಯಲ್ಲಿ ಅವರು ಸಿದ್ದತೆ ಮಾಡಿಕೊಂಡಿರಲಿಲ್ಲ ಅನ್ನುವುದು ಸ್ಪಷ್ಟವಾಗಿತ್ತು. ತಮ್ಮ ಪೂರ್ತಿ ಭಾಷಣವನ್ನು ಸಲಹೆಗಳಿಗೆ ಸೀಮಿತವಾಗಿರಿಸಿದರೇ ಹೊರತು, ನಾನೇನು ಮಾಡಬಲ್ಲೇ, ನಾನು ಕಾರ್ಯಕರ್ತರೊಂದಿಗೆ ಎಷ್ಟು ಬೆರೆಯುತ್ತೇನೆ, ವಾರ್ಡ್ ಮಟ್ಟದಲ್ಲಿ ಕಾರ್ಯಕರ್ತರ ಪಡೆ ಕಟ್ಟಲು ನಾನೇನು ಮಾಡುತ್ತೇನೆ ಎಂದು ಹೇಳಲಿಲ್ಲ. ಒಬ್ಬ ಮಹಿಳಾ ಕಾರ್ಯಕರ್ತರು 100 ಮಹಿಳಾ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಸಲಹೆ ಕೊಟ್ಟ ಅನಿತಾ ಕುಮಾರಸ್ವಾಮಿ, ಪಕ್ಷ ಕಟ್ಟಲು ನಾನು ನಿಮ್ಮ ಜೊತೆಗೆ ಮನೆ ಮನೆಗೆ ಬರುತ್ತೇನೆ ಎಂದು ಹೇಳಲೇ ಇಲ್ಲ.
ಇದೇ ವೇಳೆ ಗಂಡಸರು ಏನೇ ತಪ್ಪು ಮಾಡ್ಲಿ ಬಾಯಿ ಮುಚ್ಚಿಕೊಂಡು ಇರ್ತಾರೆ.. ಮಹಿಳೆಯರ ಬಗ್ಗೆ ಟೀಕೆ ಟಿಪ್ಪಣಿ ಬರುತ್ತವೆ. ಮನೆ ಹಾಗೂ ರಾಜಕೀಯ ಎರಡನ್ನೂ ನಿಭಾಯಿಸುವುದು ಸುಲಭದ ಕೆಲಸವಲ್ಲ. ಜೊತೆಗೆ ಮಹಿಳಾ ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳವಂತೆ ಎಂಎಲ್ಎ ಅಭ್ಯರ್ಥಿಗಳಿಗೆ ಸೂಚನೆ ಕೊಡಿ ಅನ್ನುವ ವಿಶೇಷ ಸಲಹೆಯನ್ನು ಅನಿತಾ ಮೇಡಂ ಕೊಟ್ಟಿದ್ದಾರೆ.
Discussion about this post