ಬೆಂಗಳೂರು : ಮುಂಬರುವ ಚುನಾವಣೆಯಲ್ಲಿ ಹೇಗಾದರೂ ಸರಿ ಬಹುಮತ ಪಡೆಯಬೇಕು ಅನ್ನುವುದು ದಳಪತಿಗಳ ನಿರ್ಧಾರ. ಆದರೆ ಈಗಿನ ಸಿದ್ದತೆ ನೋಡಿದರೆ ಬಹುಮತಕ್ಕಿಂತಲೂ ಜೆಡಿಎಸ್, ರಾಷ್ಟ್ರೀಯ ಪಕ್ಷಗಳಿಗೆ ಅನಿವಾರ್ಯ ಅನ್ನುವ ವಾತಾವರಣ ಸೃಷ್ಟಿಸುವಷ್ಟು ಸ್ಥಾನ ಪಡೆಯಲು ದಳಪತಿಗಳು ತಂತ್ರ ಹೂಡಿದ್ದಾರೆ.
ಇನ್ನು ದೇವೇಗೌಡರು ಕೂಡಾ ಪಕ್ಷ ಸಂಘಟನೆಗೆ ಮತ್ತೆ ಇಳಿದಿದ್ದು, ಈ ಹಿನ್ನಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಜೆಡಿಎಸ್ ಮಹಿಳಾ ಕಾರ್ಯಕರ್ತರ ಸಮಾವೇಶ ನಡೆಯಿತು. ಸಭೆಯಲ್ಲಿ ದೇವೇಗೌಡರು ಮಾತನಾಡಲು ಎದ್ದು ನಿಂತಾಗ ಕಾರ್ಯಕರ್ತರು ಊಟಕ್ಕೆ ತೆರಳಿದ್ದಾರೆ. ಇದು ದೇವೇಗೌಡರ ಅಸಮಾಧಾನಕ್ಕೆ ಕಾರಣವಾಗಿದ್ದು, ಬಹಿರಂಗವಾಗಿ ಬೇಸರ ಹೊರ ಹಾಕಿದ್ದಾರೆ. ಇದಾದ ಬಳಿಕ ಕಾರ್ಯಕರ್ತರ ಕ್ಷಮೆ ಕೋರಿದ ದೇವೇಗೌಡರು, ನಾವು ನಿರೀಕ್ಷೆ ಮಾಡಿದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದಾರೆ. ಹೀಗಾಗಿ ಗೊಂದಲವಾಗಿದೆ ಅಂದರು.
ಮತ್ತೆ ಮಾತು ಮುಂದುವರಿಸಿದ ದೇವೇಗೌಡರು, ಮುಂದಿನ ದಿನಗಳಲ್ಲಿ ನಾನು ಪ್ರವಾಸ ಕೈಗೊಳ್ಳುತ್ತೇನೆ. ಪ್ರತಿ ಜಿಲ್ಲೆಗಳಿಗೂ ಭೇಟಿ ಕೊಡುತ್ತೇನೆ. ನಾಯಕರಾದವರು ವಾರ್ಡ್ ಮಟ್ಟದಲ್ಲಿ ಪಕ್ಷದ ಸದಸ್ಯತ್ವ ಹೆಚ್ಚಿಸಬೇಕು. ತಪ್ಪಿದ್ರೆ ಬಿಬಿಎಂಪಿ ಚುನಾವಣೆಯಲ್ಲಿ ಬಿ ಫಾರಂ ಕೊಡುವುದಿಲ್ಲ ಅಂದರು.
ಇನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹಾಕುತ್ತೇವೆ ಅಂದಿರುವ ದೇವೇಗೌಡರು, ಕನಿಷ್ಟ 9 ಮಹಿಳೆಯರಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿದರು.
Discussion about this post