ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತದ ಕನಸು ಕಾಣುತ್ತಿರುವ ಜೆಡಿಎಸ್ ಎರಡಂಕಿಯ ಸ್ಥಾನಗಳನ್ನು ಪಡೆಯಲು ಪರದಾಡಲಿದೆ ಅನ್ನುವ ಮುನ್ಸೂಚನೆಯನ್ನು ಪ್ರಕಟವಾಗಿರುವ ವಿಧಾನಪರಿಷತ್ ಫಲಿತಾಂಶ ನೀಡಿದೆ. ಹಾಸನದಲ್ಲಿ ಕುಟುಂಬದ ಕುಡಿ ಸೂರಜ್ ಗೌಡ ಗೆಲುವು ಕಂಡಿದ್ದು ಬಿಟ್ರೆ ಮತ್ತೆಲ್ಲಾ ಕಡೆಗಳಲ್ಲಿ ಜೆಡಿಎಸ್ ಹೀನಾಯವಾಗಿ ಸೋತಿದೆ.
ಅಲ್ಲಿಗೆ ಜೆಡಿಎಸ್ ನಲ್ಲಿ ಕುಟುಂಬ ಸದಸ್ಯರಿಗೆ ಮಾತ್ರ ಗೆಲ್ಲುವ ತಾಕತ್ತಿದ್ದು, ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬರೋ ತಾಕತ್ತು ದಳಪತಿಗಳಿಗೆ ಇಲ್ಲ ಎಂದು ಸಾಬೀತಾಗಿದೆ. ಸ್ಥಳೀಯ ಸಂಸ್ಥೆಗಳ ಸದಸ್ಯರ ಮನ ಗೆಲ್ಲುವಲ್ಲಿ ಜೆಡಿಎಸ್ ನಾಯಕರು ವಿಫಲವಾಗಿರುವುದೇ ಈ ಸೋಲಿಗೆ ಕಾರಣ ಅನ್ನುವುದು ಸ್ಪಷ್ಟ. ಜೊತೆಗೆ ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಕೊಟ್ಟ ಹೇಳಿಕೆ ಕೂಡಾ ಸೋಲಿಗೆ ಕಾರಣ ಎನ್ನಲಾಗಿದೆ. ಪಕ್ಷ ಬಿಟ್ಟು ಹೋಗುವವರು ಹೋಗಲಿ ಅನ್ನುವ ಕುಮಾರಸ್ವಾಮಿ ಹೇಳಿಕೆ ಜೆಡಿಎಸ್ ಅಭ್ಯರ್ಥಿಗಳ ಸೋಲಿಗೆ ಮುನ್ನುಡಿ ಬರೆದಿದೆ.
ಈ ಸೋಲಿನಿಂದ ಪ್ರಾದೇಶಿಕ ಪಕ್ಷವಾಗಿ ಬೆಳೆಯಲು ಜೆಡಿಎಸ್ ಗೆ ಇದ್ದ ಕೊನೆಯ ಅವಕಾಶವೂ ಕೈ ತಪ್ಪಿದ್ದು, ಜೆಡಿಎಸ್ ನ ಭದ್ರಕೋಟೆ ಎಂದು ಕರೆಸಿಕೊಂಡ ಮಂಡ್ಯದ ಸೋಲು ಇದಕ್ಕೆ ಸಾಕ್ಷಿಯಾಗಿದೆ.
ಇನ್ನು ಈ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ. ರಾಷ್ಟ್ರೀಯ ಪಕ್ಷಗಳ ಹಣದ ಅಬ್ಬರದಲ್ಲಿ ನಾವು ಹಿನ್ನಡೆ ಅನುಭವಿಸಿದ್ದೇವೆ. ಆಣೆ, ಪ್ರಮಾಣಗಳ ನಡುವೆಯೂ ನೈತಿಕ ನೆಲೆಯಲ್ಲಿ ಸೆಣಸಿದ್ದೇವೆ
2023ರ ವಿಧಾನಸಭೆ ಚುನಾವಣೆಯೇ ನಮ್ಮ ಗುರಿ ಎಂದು ಹಿಂದೆಯೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಆ ನಿಟ್ಟಿನಲ್ಲಿ ನಮ್ಮ ತಯಾರಿ ನಡೆದಿದೆ. ಆದರೂ ಈ ಚುನಾವಣೆಯಲ್ಲಿ ಪ್ರಯತ್ನ ಮಾಡಿದ್ದೇವೆ. ʼದೊಡ್ಡ ಪಕ್ಷಗಳ ಕಾಂಚಾಣ ಹಂಚಿಕೆʼ ನಡುವೆ ನಾವು ಹಿಂದೆ ಬಿದ್ದಿದ್ದೇವೆ.
ಚುನಾವಣೆ ಎಂದರೆ ಸೋಲು-ಗೆಲುವು. ಗೆಲುವಿಗಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅವರೇ ನಮ್ಮ ಶಕ್ತಿ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು. ಈಗ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಹಣಬಲದಿಂದ ಎದುರಾಗುವ ಇಂಥ ಸೋಲುಗಳಿಗೆ ಜೆಡಿಎಸ್ ಎಂದೂ ಧೃತಿಗೆಡುವುದಿಲ್ಲ.
ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಈ ಚುನಾವಣೆಯ ಮತದಾರರು. ಜನರೇ ನೇರವಾಗಿ ಹಕ್ಕು ಚಲಾಯಿಸುವ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂಬುದು ತಿಳಿಯಲಿದೆ. ಪಕ್ಷ ಮತ್ತೆ ಪುಟಿದೆದ್ದು ಬರಲಿದೆ. ಜನರಲ್ಲಿ ಜೆಡಿಎಸ್ ಬಗೆಗಿನ ವಿಶ್ವಾಸವನ್ನು ಅಳಿಸಲಾಗದು
ಈ ಚುನಾವಣೆಯಲ್ಲಿ ಜಯ ಗಳಿಸಿದ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೆ ನನ್ನ ಶುಭಾಶಯಗಳು ಅಂದಿದ್ದಾರೆ.
Discussion about this post