ಬೆಂಗಳೂರು : ಈಗ ಘೋಷಣೆಯಾಗಿರುವ ಲಾಕ್ ಡೌನ್ ಜೂನ್ 7ಕ್ಕ ಅಂತ್ಯಗೊಳ್ಳಲಿದೆ. ಈ ನಡುವೆ ಜೂನ್ 7ರ ನಂತ್ರ ಲಾಕ್ ಡೌನ್ ವಿಸ್ತರಿಸುವ ಕುರಿತಂತೆ ಅನೇಕ ಸಚಿವರು ಹಾಗೂ ಶಾಸಕರು ಒಲವು ತೋರಿಸುತ್ತಿಲ್ಲ. ತಮ್ಮ ತಮ್ಮ ಕ್ಷೇತ್ರದಲ್ಲಿ ಜನ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಲಾಕ್ ಡೌನ್ ತೆರವುಗೊಳಿಸಿ, ಕೊರೋನಾ ಕರ್ಫ್ಯೂ ಜಾರಿಗೊಳಿಸುವಂತೆ. ಹೀಗಾಗಿ ಜೂನ್ 7 ರ ನಂತರ ಲಾಕ್ ಡೌನ್ ಮುಂದುವರಿಯುತ್ತಾ, ರಾಜ್ಯ ಸರ್ಕಾರ ಒಂದು ವಾರ ಮತ್ತೆ ಲಾಕ್ ಡೌನ್ ಹೇರುತ್ತಾ, ಜೂನ್ 30ರ ತನಕ ಲಾಕ್ ಡೌನ್ ಫಿಕ್ಸ್ ಆಗುತ್ತಾ ಅನ್ನುವ ಕುರಿತಂತೆ ಚರ್ಚೆಗಳು ನಡೆಯುತ್ತಿದೆ.
ಈ ನಡುವೆ ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನಮ್ಮ ಅಭಿಪ್ರಾಯಗಳು ಈಗ ಮುಖ್ಯವಲ್ಲ. ಜನಪ್ರತಿನಿಧಿಗಳು ಹೇಳಿದ್ದನ್ನು ಈ ಸಂದರ್ಭದಲ್ಲಿ ಪಾಲಿಸೋದು ಅಸಾಧ್ಯ. ತಜ್ಞರ ಸಮಿತಿ ಏನು ಹೇಳಿದೆ ಅನ್ನುವುದರ ಮೇಲೆ ಲಾಕ್ ಡೌನ್ ಭವಿಷ್ಯ ನಿರ್ಧಾರವಾಗಲಿದೆ ಅಂದಿದ್ದಾರೆ.
ಲಾಕ್ ಡೌನ್ ವಿಸ್ತರಣೆ ಕುರಿತಂತೆ ಚರ್ಚೆ ನಡೆಯುತ್ತಿರುವ ಕುರಿತಂತೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯದಲ್ಲಿ ಎರಡನೆ ಅಲೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಸೋಂಕಿನ ಪ್ರಮಾಣ ಕಡಿಮೆಯಾದರೂ ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ. ಹೀಗಾಗಿ ಲಾಕ್ ಡೌನ್ ವಿಸ್ತರಣೆಯೇ ಸೂಕ್ತ ಅಂದಿದ್ದಾರೆ. ಜೊತೆಗೆ ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಎಲ್ಲಾ ವರ್ಗಗಳಿಗೂ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿರುವ ಕುಮಾರಸ್ವಾಮಿ, ಇಂದು ಸಂಕಷ್ಟದಲ್ಲಿರುವವರ ಸಹಾಯಕ್ಕೆ ಸರ್ಕಾರ ಧಾವಿಸಿದರೆ ನಾಳೆ ಅವರೇ ಸರ್ಕಾರದ ಬೊಕ್ಕಸ ತುಂಬಿಸುತ್ತಾರೆ ಅಂದಿದ್ದಾರೆ.
ಇನ್ನು ಈಗಾಗಲೇ ಕೊರೋನಾ ನಿಯಂತ್ರಣ ಕುರಿತಂತೆ ರಚಿಸಲಾಗಿರುವ ತಾಂತ್ರಿಕ ಸಮಿತಿ ಲಾಕ್ ಡೌನ್ ಸಡಿಲಿಕೆ ಕುರಿತಂತೆ ವರದಿಯನ್ನು ಕೊಟ್ಟಿದ್ದು, ಸೋಂಕಿತರ ಸಂಖ್ಯೆ 5 ಸಾವಿರಕ್ಕೆ ಬರಬೇಕು,ಪಾಸಿಟಿವಿ ರೇಟ್ ಶೇ8ಕ್ಕೆ ಇಳಿಯಬೇಕು, ಸಾವಿನ ಪ್ರಮಾಣ ಶೇ 1ರಷ್ಟಿದ್ದರೆ ಮಾತ್ರ ಲಾಕ್ ಡೌನ್ ತೆಗೆಯುವುದು ಒಳಿತು. ಇಲ್ಲವಾದರೆ ಎರಡನೇ ಅಲೆ ಅಂತ್ಯವಾಗುವ ಹೊತ್ತಿಗೆ ಮೂರನೇ ಅಲೆ ದಾಳಿ ಖಚಿತ ಅಂದಿದ್ದಾರೆ.
ಮತ್ತೊಂದು ಕಡೆ ಬಿಬಿಎಂಪಿ ಜೂನ್ 7ರ ನಂತ್ರ ಏಕಾಏಕಿ ಲಾಕ್ ಡೌನ್ ತೆರವುಗೊಳಿಸುವ ಬದಲು, ನಿಧಾನವಾಗಿ ಅನ್ ಲಾಕ್ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಿದೆ.
ಈ ಎಲ್ಲದರ ನಡುವೆ ಲಾಕ್ ಡೌನ್ ವಿಸ್ತರಣೆ ಮಾಡಬೇಕಾ ಬೇಡ್ವ ಅನ್ನುವ ಕುರಿತಂತೆ ಚರ್ಚಿಸಲು ನಾಳೆ ಹಿರಿಯ ಸಚಿವರ ಸಭೆಯನ್ನು ಸಿಎಂ ಯಡಿಯೂರಪ್ಪ ಕರೆದಿದ್ದಾರೆ. ಇದೇ ಸಭೆಯಲ್ಲಿ ತಜ್ಞರು ಕೊಟ್ಟಿರುವ ವರದಿಯ ಬಗ್ಗೆಯೂ ಚರ್ಚೆಗಳು ನಡೆಯಲಿದೆ.
ರಾಜ್ಯ ಸರ್ಕಾರ ಈವರೆಗೆ ತಜ್ಞರ ಸಮಿತಿಯ ವರದಿಯನ್ನು ಜಾರಿಗೆ ಮಾಡಿದ ಉದಾಹರಣೆಗಳಿಲ್ಲ. ಹೀಗಾಗಿ ನಾಳೆ ಏನಾಗಬಹುದು ಅನ್ನುವುದನ್ನು ಊಹಿಸಲು ಸಾಧ್ಯವಿಲ್ಲ.
Discussion about this post