ಮಂಗಳೂರು : ಕೊರೋನಾ ಸೋಂಕಿನ ವಿಚಾರದಲ್ಲಿ ಆತಂಕಿತರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಇಂದು ಒಂದು ದಿನದ ಮಟ್ಟಿಗೆ ನಿಟ್ಟುಸಿರುಬಿಡಬಹುದಾಗಿದೆ. ಜಿಲ್ಲೆಯಲ್ಲಿ ಏರುತ್ತಿದ್ದ ಸೋಂಕಿನ ಪ್ರಮಾಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ದೇವಸ್ಥಾನಗಳಲ್ಲಿ ಅನ್ನಪ್ರಸಾದ ಸೇರಿದಂತೆ ಸೇವೆಗಳ ಸ್ಥಗಿತ ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ಸೋಂಕು ನಿಯಂತ್ರಣ ವಿಚಾರದಲ್ಲಿ ಈ ಪ್ರಯತ್ನ ಫಲ ನೀಡಿರಲಿಲ್ಲ. ಕೇರಳದಲ್ಲಿ ಸೋಂಕು ಅಬ್ಬರಿಸುತ್ತಿರುವ ಪರಿಣಾಮ ದಕ್ಷಿಣ ಕನ್ನಡವೂ ನರಳುವಂತಾಗಿದೆ.
ಈ ನಡುವೆ ಇಂದು ಕೇರಳದಲ್ಲಿ ಸೋಂಕಿತರ ಸಂಖ್ಯೆ 30 ಸಾವಿರದ ಗಡಿ ದಾಟಿದ್ದು, 31, 265 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 521 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 550 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 4,900 ಸಕ್ರಿಯ ಪ್ರಕರಣಗಳಿದ್ದು 19, 482 ಮಂದಿ ನಿಗಾದಲ್ಲಿದ್ದಾರೆ.
ರಾಜ್ಯದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೋಮವಾರದಿಂದ ಕೇರಳದಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದ್ದು, ರಾತ್ರಿ 10 ರಿಂದ ಬೆಳಿಗ್ಗೆ 6ರ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ. ಜೊತೆಗೆ ಶೇ7ಕ್ಕಿಂತ ಪಾಸಿಟಿವಿಟಿ ದರವಿರುವ ಪ್ರದೇಶಗಳಲ್ಲಿ ಆದಿತ್ಯವಾರ ಸಂಪೂರ್ಣ ಲಾಕ್ ಡೌನ್ ಮತ್ತೆ ಜಾರಿಗೆ ತರಲಾಗಿದೆ.
ಅತ್ತ ಕೇರಳದಲ್ಲಿ ಸೋಂಕು ಅಬ್ಬರಿಸುತ್ತಿದ್ದರೂ ಕರಾವಳಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಂದು ಕಡಿಮೆಯಾಗಿದೆ. ಶನಿವಾರದಂದು ಜಿಲ್ಲೆಯಲ್ಲಿ 207 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 5 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಸುಳ್ಯ ಮತ್ತು ಪುತ್ತೂರು ತಾಲೂಕಿನ ತಲಾ ಇಬ್ಬರು ಮತ್ತು ಹೊರ ಜಿಲ್ಲೆಯ ಮೂವರು ಸೇರಿದ್ದಾರೆ.
ಇನ್ನು ಇಂದು 312 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಪ್ರಸ್ತುತ 2565 ಸಕ್ರಿಯ ಪ್ರಕರಣಗಳಿದೆ. ಜಿಲ್ಲೆಯಲ್ಲಿ ಇಂದಿನ ದಾಖಲೆ ಪ್ರಕಾರ ಪಾಸಿಟಿವಿಟಿ ದರ ಶೇ.1.83ರಷ್ಟು ದಾಖಲಾಗಿದೆ.
Discussion about this post