ಅತ್ತ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಇತ್ತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ನೇಮಕದ ಸರ್ಕಸ್ ಕೂಡಾ ಅಂತಿಮ ಘಟ್ಟ ತಲುಪಿದೆ.
ಕೆಪಿಸಿಸಿ ಅಧ್ಯಕ್ಷರನ್ನಾಗಿ ಕನಕಪುರ ಕ್ಷೇತ್ರದ ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ನೇಮಕ ಮಾಡಲು ದೆಹಲಿ ವರಿಷ್ಠರು ಒಲವು ತೋರಿಸಿದ್ದಾರೆ. ಡಿಕೆಶಿ ವಿರುದ್ಧವಾಗಿರುವ ಎಲ್ಲಾ ಅಂಶಗಳನ್ನು ಪರಿಗಣಿಸಿದ ಮೇಲೂ, ರಾಜ್ಯದಲ್ಲಿ ಕಾಂಗ್ರೆಸ್ ಗೆ ಬಲ ತುಂಬುವ ಏಕೈಕ ಸಮರ್ಥ ವ್ಯಕ್ತಿ ಡಿಕೆಶಿ ಎಂದು ಹೈಕಮಾಂಡ್ ಮನಗಂಡಿದೆ.
ಮಾತ್ರವಲ್ಲದೆ ರಾಜಕೀಯ ಒತ್ತಡದ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಅವರು ತೋರಿದ ನಿಷ್ಟೆ ಮತ್ತು ಪಕ್ಷದ ನಾಯಕರ ಮೇಲಿನ ನಿಷ್ಠೆಯೂ ಕೂಡಾ ‘ಹಸ್ತಾ’ಧಿಪತಿಯಾಗಲು ಕಾರಣ ಎನ್ನಲಾಗಿದೆ.
ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟಿದ್ದರಿಂದಾಗಿ ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಆರಂಭಿಸಿತ್ತು. ನೇಮಕ ಕುರಿತಂತೆ ಮುಖಂಡರ ಅಭಿಪ್ರಾಯ ಸಂಗ್ರಹ ಕಾರ್ಯ ಪೂರ್ಣಗೊಂಡಿದೆ. ಶುಕ್ರವಾರ ಅಥವಾ ಶನಿವಾರ ನೇಮಕದ ಆದೇಶ ಪ್ರಕಟಗೊಳ್ಳಬಹುದು.
ಅಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ಹಾಗೂ ಎಂ.ಬಿ. ಪಾಟೀಲ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಎಚ್.ಕೆ. ಪಾಟೀಲ ಹಾಗೂ ಕೆ.ಎಚ್. ಮುನಿಯಪ್ಪ ಕೂಡ ಆಕಾಂಕ್ಷಿಗಳಾಗಿದ್ದಾರೆ.
ಹಿರಿಯ ಮುಖಂಡರ ಅಭಿಪ್ರಾಯ ಆಲಿಸಿರುವ ಪಕ್ಷದ ವರಿಷ್ಠರು ಈ ಕುರಿತ ವರದಿಯನ್ನೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಸಲ್ಲಿಸಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಈ ಬಗ್ಗೆ ಸೋನಿಯಾ ಗಾಂಧಿ ಅವರೊಂದಿಗೆ ಗುರುವಾರ ಸಂಜೆ ಸಭೆ ನಡೆಸಿದರು.
ಇನ್ಮುಂದೆ ರಾಜ್ಯದಲ್ಲಿ ಪಕ್ಷ ಸಂಘಟನೆ ಸಲುವಾಗಿ ನಳಿನ್ ಕುಮಾರ್ ಮತ್ತು ಡಿಕೆಶಿ ಪೈಪೋಟಿ ನಡೆಸಲಿದ್ದಾರೆ. ಜೆಡಿಎಸ್ ಶಕ್ತಿ ವಿಪರೀತಿವಾಗಿ ಕಳೆಗುಂದಿದ ಕಾರಣ ದಳಪತಿಗಳು ರೇಸ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಹಾಗೇ ನೋಡಿದರೆ ಪಕ್ಷ ಸಂಘಟನೆಯ ಚತುರ ಅಂದ್ರೆ ಡಿಕೆಶಿ. ನಳಿನ್ ಆ ಮಟ್ಟಿನ ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ನಾಯಕರು ಮತ್ತು ಕಾರ್ಯಕರ್ತರ ನಡುವಿನ ಕಚ್ಚಾಟವನ್ನು ನಿಯಂತ್ರಿಸುವುದೇ ದೊಡ್ಡ ಸವಾಲು. ಬಿಜೆಪಿಗೆ ಆ ಸಮಸ್ಯೆಯಿಲ್ಲ.
ಇನ್ನು ಡಿಕೆಶಿ ಪ್ರಬಲ ನಾಯಕ ನಿಜ, ಆದರೆ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಪ್ರಭಾವಶಾಲಿ ನಾಯಕನಲ್ಲ. ಇನ್ನು ನಳಿನ್ ಡಿಕೆಶಿಯಷ್ಟು ಪ್ರಬಲ ನಾಯಕನಲ್ಲ. ಮೋದಿ ಹೆಸರು ಸಂಘದ ಸಹಕಾರವೇ ಅವರಿಗೆ ಶ್ರೀರಕ್ಷೆ.
ಹೀಗಾಗಿ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇಬ್ಬರಿಗೂ ಗೆಲುವು ಪ್ರತಿಷ್ಟೆಯ ಪ್ರಶ್ನೆ. ಆದರೆ ಅಷ್ಟು ಹೊತ್ತಿಗೆ ಅಕ್ರಮ ಆಸ್ತಿ ಡಿಕೆಶಿ ಕೊರಳು ಬಿಗುಗೊಂಡರೆ ನಳಿನ್ ಹಾದಿ ಸುಗಮ.
Discussion about this post