ಬೆಂಗಳೂರು : ಕೊರೋನಾ ನಿಯಂತ್ರಣ ವಿಚಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಕೊಡಬೇಕು, ಅವರನ್ನು ಫ್ರೀ ಹ್ಯಾಂಡ್ ಆಗಿ ಬಿಡಬೇಕು ಅನ್ನುವ ಕನಿಷ್ಠ ಜ್ಞಾನ ನಮ್ಮ ರಾಜ್ಯ ಸರ್ಕಾರಕ್ಕೆ ಇರಲಿಲ್ಲ, ಹಾಗಿದ್ದರೂ ಇದ್ದ ಅಧಿಕಾರ ಬಳಸಿ ಕೊರೋನಾ ನಿಯಂತ್ರಣಕ್ಕೆ ಹೊರ ಜಿಲ್ಲಾಧಿಕಾರಿಗಳನ್ನು ಕೈ ಕಟ್ಟಿ ಹಾಕಿದ ಕೀರ್ತಿ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ.
ಮೈಸೂರು ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿಯವರು, ಸಾಂಸ್ಕೃತಿಕ ನಗರಿಯನ್ನು ಕೊರೋನಾ ಸುನಾಮಿಯಿಂದ ರಕ್ಷಿಸುವ ಸಲುವಾಗಿ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದರು. ಆದರೆ ಬೆಳಗ್ಗೆ ಡಿಸಿ ಹೊರಡಿಸಿದ ಆದೇಶ ಸಂಜೆಯಷ್ಟು ಹೊತ್ತಿಗೆ ಕಸದ ಬುಟ್ಟಿ ಸೇರಿತ್ತು.
ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಹಳ್ಳಿಗಳಿಗೆ ವ್ಯಾಪಿಸುತ್ತಿರುವ ಕೊರೋನಾ ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲು ನಿರ್ಧರಿಸಿದರು. ಅತ್ತ ಪ್ರಧಾನಿಗಳು ಜಿಲ್ಲಾಧಿಕಾರಿಗಳ ಸಭೆ ಕರೆದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆದರೆ ಈ ಸಭೆಯಲ್ಲಿ ಮಾಹಿತಿಗಳನ್ನು ಪಡೆಯಲಾಯಿತೇ ಹೊರತು, ಕೊರೋನಾ ನಿಯಂತ್ರಣ ಸಲುವಾಗಿ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ಕೊಡಲಿಲ್ಲ.
ಆದರೆ ಪ್ರಧಾನಿಗಳು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ಸಭೆ ಹಾಗಾಗಲಿಲ್ಲ. ಹಲವು ಸೂಚನೆಗಳನ್ನು ಕೊಟ್ಟ ಪ್ರಧಾನಿಸ ಹಳ್ಳಿಗಳನ್ನು ರಕ್ಷಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕೋ ಕೈಗೊಳ್ಳಿ, ನೀವು ಈ ನಿಟ್ಟಿನಲ್ಲಿ ಸರ್ವ ಸ್ವತಂತ್ರರು. ಕ್ರಮ ಯಾವುದೇ ಇರಲಿ ಜನರಿಗೆ ತೊಂದರೆಯಾಗಬಾರದು, ಕೊರೋನಾ ನಿಯಂತ್ರಣಕ್ಕೆ ಬರಬೇಕು ಅಂದರು.
ಇದಾದ ಬೆನ್ನಲ್ಲೇ ಇದೀಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎದ್ದು ನಿಂತಿದ್ದಾರೆ. ಇಷ್ಟು ದಿನಗಳ ಕಾಲ ಮೋದಿಯನ್ನು ಬೈಯುತ್ತಲೇ ಕಾಲ ಕಳೆಯುತ್ತಿದ್ದ ಅವರು, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮನಸ್ಸು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ರಾಜ್ಯ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು ಶುಕ್ರವಾರದಿಂದ ಒಬ್ಬೊಬ್ಬ ಜಿಲ್ಲಾಧಿಕಾರಿ ಜೊತೆಗೆ ತಲಾ 1 ಗಂಟೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.
Discussion about this post