ಬೆಂಗಳೂರು : ಕೊರೋನಾ ಮೂರನೇ ಅಲೆ ನಿಯಂತ್ರಣ ಸಲುವಾಗಿ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂ ಜನರಿಗೆ ಭಾರವಾಗಿದೆ. ಅದರಲ್ಲೂ ದುಡಿದು ತಿನ್ನುವ ಮಂದಿಗೆ ವಾರಾಂತ್ಯದ ಕರ್ಫ್ಯೂ ಸಂಕಷ್ಟ ತಂದೊಡ್ಡಿದೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಜನ ತಿರುಗಿ ಬಿದ್ದಿದ್ದರು. ಅದರಲ್ಲೂ ಲಾಕ್ ಡೌನ್ ವಿಧಿಸಲು ಸಲಹೆ ಕೊಟ್ಟ ತಜ್ಞರಿಗೆ ಜನ ಹಿಡಿ ಶಾಪ ಹಾಕಿದ್ದರು. ಇನ್ನು ಜನರ ಆಕ್ರೋಶಕ್ಕೆ ದನಿಗೂಡಿಸಿದ ಬಿಜೆಪಿ ನಾಯಕರು ಸಿಎಂ ಬೊಮ್ಮಾಯಿ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದರು.
ಇನ್ನು ಒಂದು ಹೆಜೆ ಮುಂದೆ ಹೋಗಿದ್ದ ಹೋಟೆಲ್ ಮಾಲೀಕರು ಈ ವಾರದ ಕರ್ಫ್ಯೂ ಉಲ್ಲಂಘಿಸಲು ನಿರ್ಧರಿಸಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜನಾಕ್ರೋಶಕ್ಕೆ ಮಣಿದಿದ್ದು, 2 ವಾರಗಳಿಂದ ಜಾರಿಯಲ್ಲಿದ್ದ ವೀಕೆಂಡ್ ಕರ್ಪ್ಯೂವನ್ನು ರದ್ದುಗೊಳಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಸಭೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಸಚಿವ ಆರ್ ಅಶೋಕ್, ಡಾ.ಕೆ.ಸುಧಾಕರ್, ಅರಗ ಜ್ಞಾನೇಂದ್ರ ಭಾಗವಹಿಸಿದ್ದರು.
ರಾಜ್ಯ ಸರ್ಕಾರದ ಈ ತೀರ್ಮಾನಕ್ಕೆ ತಜ್ಞರು ಸಂಪೂರ್ಣ ಸಹಮತ ವ್ಯಕ್ತಪಡಿಸಿಲ್ಲ ಅನ್ನಲಾಗಿದ್ದು, ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಕೊರೋನಾ ಸೋಂಕಿನ ಪ್ರಸರಣ ವೇಗ ಹಾಗೂ ಸೋಂಕಿತರ ಸಂಖ್ಯೆ ನಿರೀಕ್ಷೆಗೂ ಮೀರಲಿದೆ ಎಂದು ಎಚ್ಚರಿಸಿದ್ದಾರೆ. ಹಾಗಂತ ವೀಕೆಂಡ್ ಲಾಕ್ ಡೌನ್ ತೆರವು ಎಂದು ಸಂಭ್ರಮಪಡಬೇಕಾಗಿಲ್ಲ. ನೈಟ್ ಕರ್ಫ್ಯೂ ಎಂದಿನಂತೆ ಜಾರಿಯಲ್ಲಿರುತ್ತದೆ ಜೊತೆಗೆ ಮತ್ತಷ್ಟು ಕಠಿಣ ನಿಬಂಧನೆಗಳು ಇನ್ನು ಕೆಲವೇ ಗಂಟೆಗಳಲ್ಲಿ ಪ್ರಕಟಗೊಳ್ಳಲಿದೆ
Discussion about this post