ಬೆಂಗಳೂರು : ನಿಗದಿಯಂತೆ ಇಂದಿನಿಂದ ರಾಜ್ಯಾದ್ಯಂತ SSLC ಪರೀಕ್ಷೆಗಳು ಪ್ರಾರಂಭಗೊಳ್ಳಲಿದೆ. ಮೊದಲ ದಿನ ಕನ್ನಡ ಪರೀಕ್ಷೆ ನಡೆಯಲಿದ್ದು, ಸಮವಸ್ತ್ರದೊಂದಿಗೆ ಹಾಜರಾಗಲು ರಾಜ್ಯ ಶಿಕ್ಷಣ ಇಲಾಖೆ ಸೂಚಿಸಿದೆ. ಜೊತೆಗೆ ಹೈಕೋರ್ಟ್ ಆದೇಶದಂತೆ ಧಾರ್ಮಿಕ ಸಂಕೇತಗಳನ್ನು ಧರಿಸಿದಂತೆಯೂ ಸೂಚಿಸಲಾಗಿದೆ.
ಈ ಬಾರಿ ಒಟ್ಟು 8,73.846 ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೋಂದಾಯಿಸಿಕೊಂಡಿದ್ದು, ಇವರಿಗಾಗಿ 3,444 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷಾ ಕಾರ್ಯ ಸುಸೂತ್ರವಾಗಿ ನಡೆಯುವ ಸಲುವಾಗಿ 68 ಸಾವಿರ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಈ ಬಾರಿ ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
ಈ ನಡುವೆ ಹಿಜಾಬ್ ಇಲ್ಲದ ಹೊತು ಪರೀಕ್ಷೆ ಬರೆಯೋದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದು, ಇಂದು ಅವರು ಪರೀಕ್ಷೆ ಬರೆಯುತ್ತಾರೆಯೇ ಅನ್ನುವ ಕುತೂಹಲವಿದೆ. ಈಗಾಗಲೇ ಹೈಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದಿರುವ ಹಿಜಾಬ್ ಹೋರಾಟಗಾರ್ತಿಯರು ತರಗತಿಗಳನ್ನು ಬಹಿಷ್ಕರಿಸಿದ್ದಾರೆ.
ಇನ್ನು ಮುಸ್ಲಿಂ ಧರ್ಮಗುರುಗಳು ಎಲ್ಲರೂ ಪರೀಕ್ಷೆ ಬರೆಯಬೇಕು ಎಂದು ಕರೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಧಾರ್ಮಿಕ ಮುಖಂಡ ಖಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪೋಷಕರು ತಮ್ಮ ಮಕ್ಕಳ ಪರೀಕ್ಷೆ ಬಗ್ಗೆ ಗಮನ ಹರಿಸಬೇಕು. ದೇಶದಲ್ಲಿ ಕೋಮು ಸೌಹಾರ್ದತೆಗೆ ನಮ್ಮಿಂದ ಧಕ್ಕೆಯಾಗಬಾರದು ಅಂದಿದ್ದಾರೆ.
ಹಿಜಾಬ್ ವಿಚಾರ ಸುಪ್ರಿಂಕೋರ್ಟ್ ನಲ್ಲಿದೆ. ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ನಮ್ಮ ಸಮುದಾಯ ಶಿಕ್ಷಣದಿಂದ ವಂಚಿವಾಗಬಾರದು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರೋ ತಪ್ಪು ಮಾಹಿತಿಗಳು ಸಮಸ್ಯೆ ಬಿಗಡಾಯಿಸಲು ಕಾರಣ ಅಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಧಾರ್ಮಿಕ ಮುಖಂಡ ಹಾಗೂ ಧರ್ಮಗುರುಗಳಾದ ಉಲೆಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್, ಈ ಪರೀಕ್ಷೆ ಜೀವನದ ಅತೀ ಮುಖ್ಯ ಹಂತ, ಗರಿಷ್ಟ ಅನುಕೂಲಗಳನ್ನು ಬಳಸಿ ಎಲ್ಲರೂ ಪರೀಕ್ಷೆ ಬರೆಯಬೇಕು ಸುಪ್ರೀಂಕೋರ್ಟ್ ನಲ್ಲಿ ನಮಗೆ ನ್ಯಾಯದ ವಿಶ್ವಾಸವಿದೆ. ಅಲ್ಲಿಯವರೆಗೆ ಎಲ್ಲರೂ ಕಾಯೋಣ ಅಂದಿದ್ದಾರೆ.
Discussion about this post