ಬೆಂಗಳೂರು : ಚಂಪಾ ಎಂದೇ ಹೆಸರು ಗಳಿಸಿದ್ದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ (83) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕೋಣನಕುಂಟೆ ಆಸ್ಟ್ರಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಗೋಕಾಕ್ ಚಳವಳಿಯಲ್ಲಿಯೂ ಮುಂಚೂಣಿಯಲ್ಲಿ ಕೆಲಸ ಮಾಡಿದ್ದ ಚಂಪಾ ಸಂಕ್ರಮಣ ಅನ್ನುವ ಸಾಹಿತ್ಯ ಪತ್ರಿಕೆಯನ್ನು ಏಕಾಂಗಿಯಾಗಿ ಪ್ರಕಟಿಸುತ್ತಿದ್ದರು. ಮಾತ್ರವಲ್ಲದೆ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಚಂಪಾ ಕನ್ನಡ ಭಾಷೆಗೆ ಅನ್ಯಾಯವಾದ ಸಂದರ್ಭದಲ್ಲಿ ಸದಾ ದನಿ ಎತ್ತುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಪರಿಷತ್ ನ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದ್ದರು.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತಮುತ್ತೂರಿನಲ್ಲಿ 1939 ಜೂನ್ 18ರಂದು ಜನಿಸಿದ್ದ ಚಂಪಾ ಅವರ ತಂದೆ ಬಸವರಾಜ್ ಹಿರೇಗೌಡರು, ತಾಯಿ ಮುರಿಗೆವ್ವ. ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ಮತ್ತು ಪ್ರೌಢಶಿಕ್ಷಣ ಧಾರವಾಡದಲ್ಲಿ ಪಡೆದ ಪಾಟೀಲರು, ತಂದೆಯವರ ಇಂಗ್ಲಿಷ್ ಅಭಿಮಾನದ ಕಾರಣ ಇಂಗ್ಲಿಷ್ ಎಂ.ಎ. ಪದವಿ ಗಳಿಸಿದ್ದರು.
ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಚಂಪಾ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟ ಸಾಲು. ಇನ್ನು ಚಂಪಾ ಅವರ ಪಾರ್ಥಿವ ಶರೀರವನ್ನು ಎಲಚೇನಹಳ್ಳಿ ಮೆಟ್ರೋ ಸ್ಟೇಷನ್ ಜ್ಯೋತಿ ಶಾಲೆಯ ಪಕ್ಕದಲ್ಲೇ ಇರುವ ನಿವಾಸಕ್ಕೆ ಕೊಂಡೊಯ್ಯಲಾಗಿದೆ.
Discussion about this post