ಬೆಂಗಳೂರು : ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಲಸಿಕಾ ಕಾರ್ಯಕ್ರಮಕ್ಕೆ ಬಂದ ಅಡ್ಡಿ ಒಂದಲ್ಲ ಎರಡಲ್ಲ. ಹಾಗಿದ್ದರೂ ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಲಸಿಕೆ ಹಾಕಲು ಇನ್ನಿಲ್ಲದಂತೆ ಶ್ರಮ ಪಟ್ಟಿದೆ. ಹಾಗಂತ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ.
ದೇಶದಲ್ಲಿ ಡೆಲ್ಟಾ ಅಬ್ಬರ ಹೆಚ್ಚಾದ ಸಂದರ್ಭದಲ್ಲಿ ಭೀತಿಗೊಳಗಾದ ಜನ ಲಸಿಕೆ ಹಾಕಿಸಿಕೊಳ್ಳಲು ಧಾವಿಸಿದರು. ಆದರೆ ಯಾವಾಗ ಕೊರೋನಾ ಎರಡನೇ ಅಲೆ ತಗ್ಗಿತೋ, ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಒಲವು ತೋರಲಿಲ್ಲ.
ಆದರೆ ಇದೀಗ ದೇಶದಲ್ಲಿ ಮೂರನೇ ಅಲೆಗೆ ಮುನ್ನುಡಿ ಬರೆಯಲಾಗಿದ್ದು, ಜನವರಿ ಫೆಬ್ರವರಿ ಹೊತ್ತಿನಲ್ಲಿ ದೇಶದಲ್ಲಿ ಕೊರೋನಾ ಮೂರನೇ ಅಲೆ ಅಟ್ಟಹಾಸಗೈಯುವ ಸಾಧ್ಯತೆಗಳಿದೆ ಎಂದು ತಜ್ಞರು ಹೇಳಿದ್ದಾರೆ. ಜೊತೆಗೆ ಈ ವೇಳೆ ಆರೋಗ್ಯ ವ್ಯವಸ್ಥೆಯ ಮೇಲೂ ಸಾಕಷ್ಟು ಒತ್ತಡ ಉಂಟಾಗುವ ಸಾಧ್ಯತೆಗಳಿದೆ.
ಹಾಗಂತ ಲಸಿಕೆ ಪಡೆದವರು ಆತಂಕ ಪಡಬೇಕಾಗಿಲ್ಲ. ಒಮಿಕ್ರೋನ್ ಸೋಂಕು ಪೀಡಿತರಲ್ಲಿ ಸೋಂಕಿನ ಲಕ್ಷಣಗಳು ಸೌಮ್ಯವಾಗಿರಲಿದೆಎಂದು ಜಗತ್ತಿಗೆ ಮೊಟ್ಟ ಮೊದಲು ಒಮಿಕ್ರೋನ್ ತಳಿಯನ್ನು ಪರಿಚಯಿಸಿದ ದಕ್ಷಿಣ ಆಫ್ರಿಕಾ ತಜ್ಞೆ ಡಾ. ಏಂಜೆಲಿಕ್ ಕೊಯೆತ್ತಿ ಹೇಳಿದ್ದಾರೆ.
ಭಾರತದಲ್ಲಿ ಒಮಿಕ್ರೋನ್ ರೂಪಾಂತರಿ ವೈರಸ್ ಸೋಂಕು ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ. ದಕ್ಷಿಣ ಆಫ್ರಿಕಾದಂತೆ ಭಾರತದಲ್ಲೂ ಒಮಿಕ್ರೋನ್ ಸೋಂಕಿನ ಲಕ್ಷಣ ಸೌಮ್ಯವಾಗಿರಲಿದೆ ಅಂದಿರುವ ಅವರು ಈಗ ನೀಡಲಾಗುತ್ತಿರುವ ಲಸಿಕೆಗಳು ಒಮಿಕ್ರೋನ್ ವೇಗಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿದೆ ಅಂದಿದ್ದಾರೆ. ಹಾಗಂತ ಲಸಿಕೆ ಪಡೆಯದವರು ಶೇ 100ರಷ್ಟು ಅಪಾಯಕ್ಕೆ ತುತ್ತಾಗಲಿದ್ದಾರೆ ಎಂದು ಎಚ್ಚರಿಸಿರುವ ಅವರು ಲಸಿಕೆ ಪಡೆದವರು ಹಾಗೂ ಈ ಹಿಂದೆ ಕೊರೋನಾ ತುತ್ತಾದವರು ದೊಡ್ಡ ಮಟ್ಟಿಗೆ ಅಪಾಯಕಾರಿಯಲ್ಲ ಅಂದಿದ್ದಾರೆ.
ಇನ್ನು ಮಕ್ಕಳಿಗೂ ಒಮಿಕ್ರೋನ್ ತಗುಲುತ್ತದೆ ಎಂದು ಎಚ್ಚರಿಕೆ ನೀಡಿರುವ ಅವರು, 5 ರಿಂದ 6 ದಿನಗಳಲ್ಲಿ ಮಕ್ಕಳು ಗುಣಮುಖರಾಗುತ್ತಾರೆ ಎಂದು ಡಾ. ಏಂಜೆಲಿಕ್ ಕೊಯೆತ್ತಿ ಹೇಳಿದ್ದಾರೆ.
Discussion about this post