ಬೆಂಗಳೂರು : ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆಯ ಬೆನ್ನಲ್ಲೇ ಇದೀಗ ಹೋಟೆಲ್ ಗಳ ತಿಂಡಿ ದರ ಏರಿಕೆಯ ಬಿಸಿ ತಟ್ಟಲಿದೆ. ಇಂದಿನಿಂದ ರಾಜ್ಯಾದ್ಯಂತ ಹೋಟೆಲ್ ತಿಂಡಿ ತಿನಿಸುಗಳ ದರ ಹೆಚ್ಚಳವಾಗಲಿದೆ. ದಿನಸಿ ವಸ್ತು, ತರಕಾರಿ, ಸಿಲಿಂಡರ್ ದರ ಏರಿಕೆಯಾದ ಕಾರಣ ದರ ಏರಿಸಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.
ಕೊರೋನಾ ಕಾರಣದಿಂದ ಸಂಪೂರ್ಣ ನೆಲ ಕಚ್ಚಿದ್ದ ಹೋಟೆಲ್ ಉದ್ಯಮ ಇತ್ತೀಚೆಗಷ್ಟೇ ಚೇತರಿಸಿಕೊಳ್ಳುತ್ತಿತ್ತು. ಅಷ್ಟು ಹೊತ್ತಿಗೆ ದರಾಸುರನ ದರ್ಬಾರು ಹೋಟೆಲ್ ಉದ್ಯಮಕ್ಕೆ ಕಂಟಕವಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಒಂದಕ್ಕೆ 2,230 ರೂಪಾಯಿಯನ್ನು ಹೋಟೆಲ್ ಮಾಲೀಕರು ಪಾವತಿಸಬೇಕಾಗಿದೆ. ಕೊರೋನಾ ಕಾರಣದಿಂದ ಜನರ ಕೈಯಲ್ಲಿ ದುಡ್ಡು ಓಡಾಡುತ್ತಿಲ್ಲ. ಹೀಗಿರುವ ಸಂದರ್ಭದಲ್ಲಿ ದರ ಏರಿಸಿದರೆ ಕಷ್ಟ ಎಂದು ನಷ್ಟದಲ್ಲೇ ಹೋಟೆಲ್ ಉದ್ಯಮವನ್ನು ನಡೆಸಲಾಗಿತ್ತು. ಆದರೆ ಆರ್ಥಿಕ ಹೊರೆ ವಿಪರೀತವಾಗುತ್ತಿರುವ ಕಾರಣ ತಿಂಡಿ, ಟೀ, ಕಾಫಿ ದರದಲ್ಲಿ ಏರಿಕೆ ಮಾಡಲು ನಿರ್ಧರಿಸಲಾಗಿದೆ.

ಈಗಿನ ಮಾಹಿತಿ ಪ್ರಕಾರ ಶೇ 5 ರಿಂದ ಶೇ 10ರ ತನಕ ದರ ಏರಿಕೆಯಾಗಲಿದೆ. ಅಂದ್ರೆ ಊಟಕ್ಕೆ ನೂರು ರೂಪಾಯಿ ಇದ್ರೆ 105 ರಿಂದ 110ರ ತನಕ ಹೆಚ್ಚಾಗಬಹುದು. ಇನ್ನು 10 ರೂಪಾಯಿ ಚಹಾ 11 ರಿಂದ 12 ರೂಪಾಯಿಗೆ ಏರಲಿದೆ. ಆದರೆ ಚಿಲ್ಲರೆ ಸಮಸ್ಯೆಯ ಕಾರಣ ಇದು 15 ರೂಪಾಯಿಗೆ ಏರಿದರೂ ಅಚ್ಚರಿ ಇಲ್ಲ.
ಒಟ್ಟಿನಲ್ಲಿ ಅಚ್ಛೆ ದಿನ್ ಬರಲಿದೆ ಎಂದು ಕಾದವರಿಗೆ ದರ ಏರಿಕೆಯ ಸ್ವರೂಪದಲ್ಲಿ ಅಚ್ಛೇ ದಿನ್ ಆಗಯ ಅನ್ನುವುದು ಮಾತ್ರ ಸ್ಪಷ್ಟ.
Discussion about this post