ಬೆಂಗಳೂರು : ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬೊಮ್ಮಾಯಿಯವರನ್ನು ಸಿಎಂ ಮಾಡಿದ ಮೇಲೆ ಬಿಜೆಪಿಯನ್ನು ಟೀಕಿಸಲು ಪ್ರತಿಪಕ್ಷಗಳ ಬಳಿ ಅಸ್ತ್ರಗಳಿರಲಿಲ್ಲ. ಯಡಿಯೂರಪ್ಪ ಸಿಎಂ ಆಗಿದಷ್ಟು ದಿನ ಅವರ ಮಕ್ಕಳು, ಜೈಲಿಗೆ ಹೋಗಿ ಬಂದವರು ಎಂದೆಲ್ಲಾ ಟೀಕಿಸಲಾಗುತ್ತಿತ್ತು. ಆದರೆ ಬೊಮ್ಮಾಯಿ ಬಂದ ಮೇಲೆ ಸಮಸ್ಯೆಯಾಗಿತ್ತು.
ಈ ವೇಳೆ ಕಾಂಗ್ರೆಸ್ ಕೈಗೆತ್ತಿಕೊಂಡಿದ್ದು ಆರ್ ಎಸ್ ಎಸ್ ವಿಚಾರ. ಬಿಜೆಪಿ ಪಕ್ಷ ಅದರ ಆಡಳಿತ, ಬಿಜೆಪಿ ನಾಯಕರ ಭ್ರಷ್ಟಚಾರ ವಿಚಾರ, ರಾಜ್ಯದ ಕಾನೂನು ಸುವ್ಯವಸ್ಥೆ ವಿಚಾರಗಳನ್ನು ಹೊರ ಜಗತ್ತಿಗೆ ತೆರೆದಿಡಬೇಕಾಗಿದ್ದ ಕಾಂಗ್ರೆಸ್ ಅವೆಲ್ಲವನ್ನೂ ಸೈಡಿಗಿಟ್ಟು ಆರ್.ಎಸ್.ಎಸ್ ಕಡೆಗೆ ಗುರಿಯಿಟ್ಟಿದೆ. ಅಲ್ಪಸಂಖ್ಯಾತರ ಮತಗಳನ್ನು ಗಳಿಸುವ ನಿಟ್ಟಿನಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುತ್ತಿದೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಕಾಂಗ್ರೆಸ್ ಆರ್.ಎಸ್.ಎಸ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಜೆಡಿಎಸ್ ಕೂಡಾ ಅಲ್ಪಸಂಖ್ಯಾತರ ಒಲೈಕೆಗೆ ಮುಂದಾಗಿದ್ದು, ದಳಪತಿಗಳು ಸಂಘ ಪರಿವಾರ ವಿರುದ್ಧ ವಾಗ್ದಾಳಿ ಪ್ರಾರಂಭಿಸಿದ್ದಾರೆ. ಕುಮಾರಸ್ವಾಮಿ ಸಂಘವನ್ನು ಟೀಕಿಸಲು ಪ್ರಾರಂಭಿಸುತ್ತಿದ್ದಂತೆ ಅದನ್ನು ಎದುರಿಸಬೇಕಾಗಿದ್ದ ಬಿಜೆಪಿ ನಾಯಕರು ಎರಡು ದಿನ ಟ್ವೀಟ್ ಮಾಡಿ ಶಸ್ತ್ರತ್ಯಾಗ ಮಾಡಿ ಕೂತಿದ್ದಾರೆ. ತಮ್ಮನ್ನು ಬೆಳೆಸಿದ ಸಂಘದ ರಕ್ಷಣೆಗೆ ಧಾವಿಸಬೇಕಾಗಿದ್ದ ಬಿಜೆಪಿ ಲೀಡರ್ ಗಳು ಮೌನಕ್ಕೆ ಶರಣಾಗಿದ್ದಾರೆ. ಕುಮಾರಸ್ವಾಮಿಯವರನ್ನು ಕಟ್ಟಿ ಹಾಕುವ ಒಂದೇ ಒಂದು ಹೇಳಿಕೆ ನೀಡಲು ಕಮಲ ಪಕ್ಷದ ನಾಯಕರಿಗೆ ಸಾಧ್ಯವಾಗಿಲ್ಲ.
ಈ ನಡುವೆ ಕುಮಾರಸ್ವಾಮಿ ವಿರುದ್ಧ ಮುಗಿಬಿದ್ದ ಸಿಟಿ ರವಿಯವರನ್ನು ಕಟ್ಟಿಹಾಕುವಲ್ಲಿಯೂ ಕುಮಾರಸ್ವಾಮಿ ಯಶಸ್ವಿಯಾಗಿರುವುದನ್ನು ನೋಡಿದರೆ ಮಾಜಿ ಸಿಎಂ ಬಳಿ ಸರಕು ಸಿಕ್ಕಾಪಟ್ಟೆ ಇದೆ ಅಂದಾಯ್ತು. ರವಿ ವಿರುದ್ಧ ಕುಮಾರಸ್ವಾಮಿ ಮಾಡಿದ ಒಂದೇ ಒಂದು ಟ್ವೀಟ್ JDS ಹಾಗೂ ಬಿಜೆಪಿ ನಾಯಕರ ಗುಪ್ತ ಸಂಬಂಧಗಳ ಬಗ್ಗೆ ಪ್ರಶ್ನೆ ಮೂಡಿಸಿದೆ.
ಈ ನಡುವೆ ಜೆಡಿಎಸ್ ಕಾರ್ಯಕರ್ತರೊಬ್ಬರು ಸಿಟಿ ರವಿಗೆ ಕುಮಾರಸ್ವಾಮಿ ಹಣಕಾಸಿನ ಸಹಾಯ ಮಾಡಿದ್ದಾರೆ ಅನ್ನುವುದನ್ನು ಬಹಿರಂಗಗೊಳಿಸಿದ್ದಾರೆ. ಈ ಮೂಲಕ ತಳಮಟ್ಟದಲ್ಲಿ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಹೋರಾಟ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರ ಪಾಡೇನು ಅನ್ನುವುದನ್ನು ಬಹಿರಂಗ ಮಾಡಿದ್ದಾರೆ.
ಹೋಗ್ಲಿ RSS ಅನ್ನು ಹಿಗ್ಗಾಮುಗ್ಗಾ ಜಾಡಿಸುತ್ತಿರುವ ಕುಮಾರಸ್ವಾಮಿ ಮುಂದೆ ಯಾವುದೇ ರಾಜಕೀಯ ಸಂಬಂಧ ಬೆಳೆಸುವುದಿಲ್ಲ ಎಂದು ಘೋಷಿಸುವ ಎದೆಗಾರಿಕೆಯನ್ನು ಬಿಜೆಪಿ ನಾಯಕರು ತೋರಿದರೆ ಕಮಲ ಕಾರ್ಯಕರ್ತರ ಹೋರಾಟಕ್ಕಾದರೂ ಬೆಲೆ ಸಿಗುತ್ತದೆ.
Discussion about this post