ನವದೆಹಲಿ : ಹರೇಕಳ ಹಾಜಬ್ಬ, ತನಗಾದ ಅನ್ಯಾಯ ಈ ಸಮಾಜಕ್ಕೆ ಆಗಬಾರದು ಅನ್ನುವ ಕಾರಣದಿಂದ ಕಿತ್ತಳೆ ಶಾಲೆ ಕಟ್ಟಿದ ಸಾಧಕ. ಒಂದಕ್ಷರ ಓದಲು ಬರೆಯಲು ಬಾರದಿದ್ದರೂ ಸರ್ಕಾರಿ ಕಚೇರಿ ಅಲೆದು ಚಪ್ಪಲಿ ಸವೆಸಿ ಶಾಲೆ ಕಟ್ಟಿದ ಛಲಗಾರ. ತನ್ನೂರಿನಲ್ಲೊಂದು ಅಕ್ಷರ ಕಲಿಸುವ ಶಾಲೆ ನಿರ್ಮಾಣವಾಗುವ ಸಲುವಾಗಿ ಪರಿಶ್ರಮ ಪಟ್ಟ ಸಂದರ್ಭದಲ್ಲಿ ಪಟ್ಟ ಸಂಕಷ್ಟ, ಅನುಭವಿಸಿದ ಅವಮಾನ ಒಂದಲ್ಲ ಎರಡಲ್ಲ.
ಸರ್ಕಾರಿ ಅಧಿಕಾರಿಗಳು ಬರೀಗಾಲ ಫಕೀರನನ್ನು ಕಂಡು ಅದೆಷ್ಟೋ ಸಲ ಜೋಕ್ ಮಾಡಿದ್ದು ಉಂಟು ( ಸರ್ಕಾರಿ ಕಚೇರಿಯೊಳಗೆ ಹೋಗುವಾಗ ಹಾಜಬ್ಬ ಚಪ್ಪಲಿ ಹಾಕೋದಿಲ್ಲ. ಸರ್ಕಾರಿ ಕಚೇರಿಗಳಂದ್ರೆ ಅವರಿಗೆ ಅದು ದೇವಸ್ಥಾನವಿದ್ದಂತೆ.) ಇನ್ನು ಈ ಹಾಜಬ್ಬ ಎದುರಗಡೇ ಯಾರೇ ಸಿಗಲಿ, ತನಗಾಗಿ, ತನ್ನ ಮನೆಗಾಗಿ ಏನು ಕೇಳಿದವರಲ್ಲ. ಅವರ ಬೇಡಿಕೆ ಒಂದೇ ತನ್ನ ಶಾಲೆಯ ಅಭಿವೃದ್ಧಿ, ಮಂತ್ರಿಗಳು, ಶಾಸಕರು, ಅಧಿಕಾರಿಗಳು, ದಾನಿಗಳು ಯಾರೇ ಸಿಕ್ರು, ಸರ್ ನಮ್ಮ ಶಾಲೆಗೆ ಎಂದೇ ಮಾತು ಪ್ರಾರಂಭಿಸುತ್ತಾರೆ. ದಿನದ 24 ಗಂಟೆಯೂ ಅವರಿಗೆ ಶಾಲೆಯದ್ದೇ ಧ್ಯಾನ.

ಇಂದು ದೆಹಲಿಗೆ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಹೋದ ಸಂದರ್ಭದಲ್ಲೂ ಹಾಜಬ್ಬ ಅವರ ಮುಗ್ಧತೆಗೆ ದೆಹಲಿಯ ಮಂದಿ ಅಚ್ಚರಿ ಪಟ್ಟಿದ್ದಾರೆ. ಪ್ರಶಸ್ತಿ ಸ್ವೀಕರಿಸುವ ಸಂದರ್ಭದ ಸರಳತೆ ಕಂಡು ರಾಷ್ಟ್ರಪತಿಗಳೇ ಅಚ್ಚರಿಗೊಂಡಿದ್ದಾರೆ. ಬರೀಗಾಲಲ್ಲಿ ಬಂದು ಪ್ರಶಸ್ತಿ ಸ್ವೀಕರಿಸಿದ ಅಕ್ಷರ ಸಂತನನ್ನು ಕಂಡು ಸೇರಿದ್ದ ರಾಜಕಾರಣಿಗಳು, ಅಧಿಕಾರಿಗಳು ಕೂಡಾ ಮಂತ್ರ ಮುಗ್ಧರಾಗಿದ್ದಾರೆ.

ಈ ನಡುವೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಹಾಜಬ್ಬ, ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ. ನನ್ನ ಗುರುತಿಸಿದ ಎಲ್ಲರಿಗೂ ಧನ್ಯವಾದ. ಚಹಾ ಕೂಟದಲ್ಲಿ ಪ್ರಧಾನಿ ನನ್ನ ಕೈಮುಟ್ಟಿ ಮಾತನಾಡಿಸಿದ್ರು. ನಿರ್ಮಲಾ ಸೀತಾರಾಮನ್ ಮೇಡಂ ಅವರನ್ನು ಕೂಡಾ ಭೇಟಿಯಾಗಿದ್ದೇನೆ. ನಮ್ಮ ಶಾಲೆಯ ಡೆವಲೆಂಪ್ ಮೆಂಟ್ ಗೆ ಸಹಾಯ ಕೇಳಿದ್ದೇನೆ ಅನ್ನುವ ಮೂಲಕ, ದೆಹಲಿಗೆ ಹೋದ್ರು ನನಗೆ ಶಾಲೆಯದ್ದೇ ಧ್ಯಾನ ಅನ್ನುವುದನ್ನು ತೋರಿಸಿದ್ದಾರೆ.

Discussion about this post