ಬೆಂಗಳೂರು : ಪ್ರತಿ ಜಿಲ್ಲೆಗೊಂದು ಸರ್ಕಾರಿ ಗೋಶಾಲೆ ನಿರ್ಮಿಸುವುದಾಗಿ ಸರ್ಕಾರಿ ಘೋಷಿಸಿ ವರ್ಷ ಸಮೀಪಿಸುತ್ತಿದೆ. ಆದರೆ ಘೋಷಣೆ ಕಾಗದದಲ್ಲೇ ಉಳಿದುಕೊಂಡಿತ್ತು. ಗೋವಿನ ಹೆಸರು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಗೋವಿನ ವಿಚಾರದಲ್ಲಿ ಮಾತ್ರ ನಿರ್ಲಕ್ಷ್ಯ ವಹಿಸಿತ್ತು. ಈ ನಡುವೆ ಇದೀಗ ಚಿಕ್ಕಮಗಳೂರಿನ ಕಡೂರಿನ ಮೊದಲ ಸರ್ಕಾರಿ ಗೋಶಾಲೆ ಇಂದು ಲೋಕಾರ್ಪಣೆಯಾಗಲಿದೆ.
ಕಡೂರು ತಾಲೂಕಿನ ಎಮ್ಮೆದೊಡ್ಡಿಯಲ್ಲಿ ಸಚಿವ ಪ್ರಭು ಚವ್ಹಾಣ್ ಗೋಶಾಲೆಯನ್ನು ಉದ್ಘಾಟಿಸಲಿದ್ದಾರೆ. ಅಂದಾಜು 53 ಲಕ್ಷ ವೆಚ್ಚದಲ್ಲಿ ಗೋಶಾಲೆ ನಿರ್ಮಾಣವಾಗಿದ್ದು, 200ಕ್ಕೂ ಅಧಿಕ ಜಾನುವಾರುಗಳಿಗೆ ಆಶ್ರಯ ನೀಡಬಹುದಾಗಿದೆ. 2 ಎಕರೆಯಲ್ಲಿ ಗೋಶಾಲೆ ನಿರ್ಮಾಣವಾಗಿದ್ದು, 8 ಎಕರೆಯಲ್ಲಿ ಮೇವು ಬೆಳೆಯಲು ನಿರ್ಧರಿಸಲಾಗಿದೆ.
ಇನ್ನು ಇದೇ ಗೋಶಾಲೆಯಲ್ಲಿ ಗೋವುಗಳ ದತ್ತಿಗೂ ಅವಕಾಶವಿದ್ದು, 11 ಸಾವಿರ ರೂಪಾಯಿ ಕೊಟ್ಟು 1 ವರ್ಷಕ್ಕೆ 1 ಗೋವನ್ನು ದತ್ತು ಪಡೆಯಬಹುದಾಗಿದೆ. ರಾಜ್ಯ ಸರ್ಕಾರ ಪ್ರತೀ ರಾಸುವಿಗೆ ನಿರ್ವಹಣಾ ವೆಚ್ಚವಾಗಿ 17.50 ಪೈಸೆ ನೀಡುತ್ತದೆ.
ಪ್ರಸ್ತುತ ಚಿಕ್ಕಮಗಳೂರಿನಲ್ಲಿ 7 ಖಾಸಗಿ ಗೋಶಾಲೆಗಳು ಕಾರ್ಯನಿರ್ವಹಿಸುತ್ತಿದೆ. ಕೊಪ್ಪ ತಾಲೂಕಿನಲ್ಲಿ 4, ಶೃಂಗೇರಿ, ಕಡೂರು, ಬಾಳೆಹೊನ್ನೂರಿನಲ್ಲಿ ತಲಾ ಒಂದು ಗೋಶಾಲೆ ಕೆಲಸ ಮಾಡುತ್ತಿದೆ. ಇವುಗಳಲ್ಲಿ ಒಟ್ಟು 1139 ರಾಸುಗಳನ್ನು ಸಾಕಲಾಗುತ್ತಿದೆ.
Discussion about this post