ಬೆಂಗಳೂರು : ಕೊರೋನಾ ಸೋಂಕಿನ ಎರಡನೆ ಅಲೆಯ ಕಾರಣದಿಂದ ಕರ್ನಾಟಕ ತತ್ತರಿಸಿ ಹೋಗಿದೆ. ಬೆಂಗಳೂರಿಗೆ ಬೆಡ್, ಆಕ್ಸಿಜನ್ ಇಲ್ಲದೆ ಜನ ತತ್ತರಿಸಿ ಹೋಗಿದ್ದಾರೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಗಮನಿಸಿದರೆ ಇಂದು ಬೆಂಗಳೂರಿನಲ್ಲಾಗಿರುವ ಪರಿಸ್ಥಿತಿ ನಾಳೆ ಕರ್ನಾಟಕ ಬೇರೆ ಜಿಲ್ಲೆಗಳಲ್ಲೂ ಆಗೋದರಲ್ಲಿ ಸಂಶಯವಿಲ್ಲ.
ಕೊರೋನಾ ಸೋಂಕಿನ ಕಾರಣದಿಂದಲೇ ಕರ್ನಾಟಕದ ಬೊಕ್ಕಸಕ್ಕೆ ತೀವ್ರ ನಷ್ಟವಾಗಿದ್ದು, ಸಾಲ ತರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ. ಈ ನಡುವೆ ಯಡಿಯೂರಪ್ಪ ಅವರದ್ದು ಮಾತ್ರ ಯಾರದ್ದೋ ದುಡ್ಡು ಎಲಮ್ಮನ ಜಾತ್ರೆ ಕಾನ್ಸೆಪ್ಟ್.
ಕೊರೋನಾ ಸೋಂಕು ನಿಭಾಯಿಸುವಲ್ಲಿ ವಿಫಲವಾಗಿರುವ ನನ್ನ ಕುರ್ಚಿಗೆ ಎಲ್ಲಿ ಕಂಟಕ ಬಂದು ಬಿಡುತ್ತದೋ ಎಂದು ಆತಂಕಕ್ಕೆ ಬಿದ್ದಿರುವ ಯಡಿಯೂರಪ್ಪ ಮೋದಿಯನ್ನು ಮೆಚ್ಚಿಸಲು ಪತ್ರಿಕೆಗಳಿಗೆ ಫುಲ್ ಪೇಜ್ ಜಾಹೀರಾತು ಬಿಡುಗಡೆ ಮಾಡಿದ್ದಾರೆ. ಅದು ಫ್ರಂಟ್ ಪೇಜ್ ಜಾಹೀರಾತು ಅನ್ನುವುದು ಗಮನಿಸಬೇಕಾಗಿರುವ ಅಂಶ. ಈ ಜಾಹೀರಾತುಗಳಿಗೆ ಸುರಿದಿರುವ ಹಣದಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಸಾವಿರಾರು ಮಂದಿಯನ್ನು ಬದುಕಿಸಬಹುದಿತ್ತು. ಆದರೆ ಯಡಿಯೂರಪ್ಪ ಅವರಿಗೆ ಸಾವಿರಾರು ಜನರ ಜೀವಕ್ಕಿಂತ ಅವರ ಕುರ್ಚಿಯೇ ಮುಖ್ಯವಾಗಿತ್ತು.
ಮೆಟ್ರೋ 2ನೇ ಹಂತದ ಯೋಜನೆಗಳಿಗೆ ಕೇಂದ್ರ ಅನುದಾನ ನೀಡಿದ್ದನ್ನೇ ನೆಪ ಮಾಡಿಕೊಂಡ ಯಡಿಯೂರಪ್ಪ ಮೋದಿಗೆ ಬಕೆಟ್ ಹಿಡಿಯಲೆಂದೇ ಜಾಹೀರಾತು ಕೊಟ್ಟಿದ್ದಾರೆ. ಹಾಗೇ ನೋಡಿದರೆ ಮೋದಿ ಮೆಟ್ರೋ ಯೋಜನೆಯನ್ನು ದಾನ ಶೂರ ಕರ್ಣ ಅನ್ನುವಂತೆ ಕೊಟ್ಟಿಲ್ಲ, ಅದನ್ನು ಕೊಡುವುದು ಅವರ ಧರ್ಮ, ಪಡೆಯುವುದು ನಮ್ಮ ಹಕ್ಕಾಗಿತ್ತು.
ಹೋಗ್ಲಿ ಹಾಗೆಲ್ಲಾ ಮೋದಿಯನ್ನು ಮೆಚ್ಚಿಸಲೇಬೇಕು ಅನ್ನುವುದಾಗಿದ್ರೆ ಶಿವಮೊಗ್ಗದ ಯಾವುದಾದರೂ ಒಂದು ಆಸ್ತಿಯನ್ನು ಮಾರಿ ಜಾಹೀರಾತು ಕೊಡಬಹುದಾಗಿತ್ತು, ಅದಕ್ಕೆ ಕನ್ನಡಿಗರ ತೆರಿಗೆ ದುಡ್ಡು ಬೇಕಾಗಿರಲಿಲ್ಲ. ಇನ್ನು ಈ ಯಡಿಯೂರಪ್ಪ ಸರ್ಕಾರ ನಡೆಯನ್ನು ಖಂಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಇದೊಂದು ಮೂರ್ಖ ಸರ್ಕಾರ ಅಂದಿದ್ದಾರೆ. ಇಷ್ಟಾದ ಮೇಲೆ ಯಡಿಯೂರಪ್ಪ ಏನು ಮಾಡಲು ಸಾಧ್ಯ, ಕುಮಾರಸ್ವಾಮಿ ಹೇಳಿದ ಮಾತನ್ನು ಕೇಳಿ ಮುಖ ಒರೆಸಿಕೊಳ್ಳಬೇಕಷ್ಟೆ.
Discussion about this post