ಕೇರಳದಲ್ಲಿ ಝೀಕಾ ವೈರಸ್ ಸೋಂಕು ವ್ಯಾಪಕವಾಗುತ್ತಿದ್ದು ಮತ್ತೆ ಐವರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಝೀಕಾ ಸೋಂಕಿತರ ಒಟ್ಟಾರೆ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.
ಈಗಾಗಲೇ ಸೋಂಕು ಹೆಚ್ಚಿರುವ ಪ್ರದೇಶಗಳಿಂದ ಇತರ ಸ್ಥಳಗಳಿಗೆ ಸೋಂಕು ಹರಡುವುದನ್ನು ತಡೆಯಲು ಈ ಪ್ರದೇಶದಲ್ಲಿ ಸೊಳ್ಳೆಗಳನ್ನು ನಾಶಪಡಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಈ ನಡುವೆ ಕೇರಳದಲ್ಲಿ ಝೀಕಾ ವೈರಸ್ ಸೋಂಕು ಉಲ್ಭಣವಾಗುತ್ತಿರುವ ಹಿನ್ನಲೆಯಲ್ಲಿ ಕೇರಳದಲ್ಲಿ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಆದೇಶಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಚಾಮರಾಜನಗರ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರಿಗೆ ಸೂಚಿಸಲಾಗಿದೆ.
ಪ್ರಸ್ತುತ ಮಳೆಗಾಲ ಈ ವೈರಸ್ ಹರಡಲು ಈ ಸೊಳ್ಳೆಗೆ ಅನುಕೂಲವಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಯಾವುದೇ ಜ್ವರವನ್ನು ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿಯಾಗುವಂತೆ ಸೂಚಿಸಿದ್ದಾರೆ.
ಈ ನಡುವೆ ಕೇರಳದ ಜೊತೆ ಗಡಿ ಹಂಚಿಕೊಂಡಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ 16 ಹೆಚ್ಚುವರಿ ಚೆಕ್ಪೋಸ್ಟ್ ತೆರೆಯಲಾಗಿದೆ. ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ತಲಪಾಡಿ, ನೆತ್ತಿಲಪದವು, ನಾರ್ಯ ಕ್ರಾಸ್, ನಂದರಪಡ್ಪು, ಮುದುಂಗಾರುಕಟ್ಟೆ, ತೌಡುಗೋಳಿ ಹಾಗೂ ಜಿಲ್ಲಾ ಪೋಲೀಸ್ ವ್ಯಾಪ್ತಿಯ ಹತ್ತು ಕಡೆಗಳಲ್ಲಿ ಸೇರಿದಂತೆ 16 ಗಡಿಗಳಲ್ಲಿ ಪ್ರಯಾಣಿಕರ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.
Discussion about this post