ಬೆಂಗಳೂರು : ಲಘು ಹೃದಯಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದ ಮಂಡ್ಯದ 5 ರೂಪಾಯಿ ಖ್ಯಾತಿಯ ವೈದ್ಯ ಶಂಕರೇಗೌಡ ಶಸ್ತ್ರಚಿಕಿತ್ಸೆ ಮುಗಿಸಿ ಇದೀಗ ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆಯಾಗಿದ್ದಾರೆ.
ಒಂದು ತಿಂಗಳ ಹಿಂದೆ ಹೃದಯದ ರಕ್ತನಾಳಗಳು ಬ್ಲಾಕ್ ಆಗಿದ್ದ ಕಾರಣ ಶಂಕರೇಗೌಡ ಅವರಿಗೆ ಹೃದಯಾಘಾತವಾಗಿತ್ತು. ಈ ವೇಳೆ ಅವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬಳಿಕ ಅವರನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಡಾ. ವಿವೇಕ್ ಜವಳಿ ಅವರ ತಂಡ ಶಂಕರೇಗೌಡ ಅವರ ಆರೋಗ್ಯದ ಬಗ್ಗೆ ನಿಗಾವಹಿಸಿತ್ತು.
ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಶಂಕರೇಗೌಡ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, 6 ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ಇನ್ನು ಆಸ್ಪತ್ರೆಯಿಂದ ತೆರಳುವ ಮುನ್ನ ಮಾತನಾಡಿದ ಡಾ. ಶಂಕರೇಗೌಡ, ನನ್ನ ಆರೋಗ್ಯ ಸುಧಾರಣೆಗೆ ಶ್ರಮಿಸಿದ ಎಲ್ಲರಿಗೂ ಚಿರಋಣಿ. ಕರ್ನಾಟಕದ ಮಂದಿ ಕೂಡಾ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. 6 ವಾರಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಆದಾದ ಬಳಿಕ ನನ್ನ 5 ರೂಪಾಯಿ ಚಿಕಿತ್ಸೆ ಮುಂದುವರಿಯಲಿದೆ ಅಂದಿದ್ದಾರೆ.
ಇದೇ ವೇಳೆ ಹೃದಯ ತಜ್ಞ ಡಾ. ವಿವೇಕ್ ಜವಳಿ ಮಾತನಾಡಿ, 67ರ ಹರೆಯದ ಡಾ. ಶಂಕರೇಗೌಡ ಮಂಡ್ಯದಲ್ಲಿ ಹೃದಯಾಘಾತಕ್ಕೆ ಒಳಗಾದರು. ಈ ವೇಳೆ ಮೈಸೂರಿನಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಎದೆನೋವು ಹೆಚ್ಚಾದ ಕಾರಣ ಬೆಂಗಳೂರಿಗೆ ಕರೆ ತರಲಾಯ್ತು. ಹಲವು ಪರೀಕ್ಷೆಗಳ ಬಳಿಕ ಒಂದಿಷ್ಟು ಸಮಸ್ಯೆಗಳು ಕಂಡ ಬಂದ ಹಿನ್ನಲೆಯಲ್ಲಿ ಮೇ ತಿಂಗಳಲ್ಲಿ ಒಂದು ವಾರ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಬಳಿಕ ವಿಶ್ರಾಂತಿಗಾಗಿ ಮಂಡ್ಯಗೆ ಕಳುಹಿಸಲಾಗಿತ್ತು. ಆರೋಗ್ಯ ಸ್ಥಿರವಾದ ಬಳಿಕ ಅಂಜಿಯೋಪ್ಲ್ಯಾಸಿ ಮುಗಿಸಿ, ಯಶಸ್ವಿಯಾಗಿ ಹೃದಯ ಶಸ್ತ್ರ ಚಿಕಿತ್ಸೆ ಮುಗಿಸಲಾಗಿದೆ ಅಂದರು.
Discussion about this post