ಬೆಂಗಳೂರು : ಯಡಿಯೂರಪ್ಪ ಬದಲಾವಣೆ ಬೆನ್ನಲ್ಲೇ ವಲಸೆ ಬಂದು ಸಚಿವರಾದವರಿಗೆ ಆತಂಕ ಶುರುವಾಗಿದೆ. ಯಡಿಯೂರಪ್ಪ ಅವರನ್ನು ನಂಬಿಕೊಂಡು ಬಂದು ಕೆಟ್ಟವೋ ಅನ್ನುವ ಭಯ ಕಾಡಲಾರಂಭಿಸಿದೆ. ಆದರೆ ಯಡಿಯೂರಪ್ಪ ಮಾತ್ರ ನಿಮಗೇನೂ ಆಗಲ್ಲ, ನಾನಿದ್ದೇನೆ ಎಂದು ಭರವಸೆ ಕೊಟ್ಟಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ಸಂಪುಟ ರಚನೆಯಾಗುವ ವೇಳೆ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಲಿದೆ.
ಹೀಗಾಗಿ ಮಿತ್ರಮಂಡಳಿಯಲ್ಲಿರುವ ಸಚಿವರ ಮೌಲ್ಯಮಾಪನ ನಡೆಯಲಿದ್ದು, ಉತ್ತಮ ಕೆಲಸ ಮಾಡಿದ ಸಚಿವರು ಮಾತ್ರ ಉಳಿದುಕೊಳ್ಳಲಿದ್ದಾರೆ. ಉಳಿದಂತೆ ಕೇಂದ್ರದ ನಾಯಕರ ಮೌಲ್ಯಮಾಪನದಲ್ಲಿ ಫೇಲ್ ಅಂದ್ರೆ ಮಂತ್ರಿ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಕೇವಲ ಸಚಿವರಾಗಿ ಮಾಡಿರುವ ಕೆಲಸವಲ್ಲದೆ, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹೇಗೆ ಮಾಡಿದ್ದಾರೆ ಅನ್ನುವುದು ಕೂಡಾ ಮುಖ್ಯವಾಗುತ್ತದೆ. ಹೀಗಾಗಿ ವಲಸೆ ಬಂದವರು ಬಿಜೆಪಿಯೊಂದಿಗೆ ಮಾನಸಿಕವಾಗಿ ಸೇರಿಕೊಂಡಿಲ್ಲ ಅಂದ್ರೆ ಕೇವಲ ಶಾಸಕ ಸ್ಥಾನ ಮಾತ್ರ ಉಳಿಯಲಿದೆ.
ಈ ನಡುವೆ ಮಂಗಳವಾರ ನಡೆದ ಶಾಸಕಾಂಗ ಸಭೆಗೆ ಮಿತ್ರಮಂಡಳಿಯ ಸೋಮಶೇಖರ್, ಎಂಟಿಬಿ, ಬಿಸಿ ಪಾಟೀಲ್ ಹೀಗೆ ಬಹುತೇಕರು ಜೊತೆಗೆ ಆಗಮಿಸಿದ್ದಾರೆ ಈ ಮೂಲಕ ನಾವೆಲ್ಲರೂ ಒಟ್ಟಾಗಿದ್ದೇವೆ, ನಮ್ಮನ್ನು ಮುಟ್ಟಲು ಬಂದ್ರೆ ಸರ್ಕಾರ ಬೀಳಿಸುತ್ತೇವೆ ಅನ್ನುವ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಈ ಮಿತ್ರಮಂಡಳಿಗೆ ಆರೋಗ್ಯ ಸಚಿವ ಸುಧಾಕರ್ ಕೈಕೊಟ್ಟಂತೆ ಕಾಣಿಸುತ್ತಿದೆ.
ಶಾಸಕಾಂಗ ಪಕ್ಷದ ಸಭೆಗೆ ಮಿತ್ರ ಮಂಡಳಿ ಜೊತೆಗೆ ಬಾರದ ಅವರು, ಬೊಮ್ಮಾಯಿ ಹಾಗೂ ಆರ್ ಅಶೋಕ್ ಜೊತೆಗೆ ಬಂದಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸುಧಾಕರ್ ಅವರಿಗೂ ಸಚಿವ ಸ್ಥಾನ ಕಳೆದುಕೊಳ್ಳುವ ಭಯ ಕಾಡುತ್ತಿದೆಯೇ. ಸಚಿವರಾಗಿ ಅವರ ಕೆಲಸ ಉತ್ತಮವಾಗಿದೆ. ಆದರೆ ಕ್ಷೇತ್ರದಲ್ಲಿ ಬಿಜೆಪಿಯ ಮೂಲ ಕಾರ್ಯಕರ್ತರೊಂದಿಗೆ ಅವರ ಹೊಂದಾಣೆಕೆ ಇಲ್ಲ ಅನ್ನುವ ಆರೋಪವಿದೆ.
Discussion about this post