ಬೆಂಗಳೂರು : ಮೆಡಿಕಲ್ ಮಾಫಿಯಾ, ಆಸ್ಪತ್ರೆಗಳ ದಂಧೆ ಕುರಿತಂತೆ ದನಿ ಎತ್ತಿದ ವೈದ್ಯರೊಬ್ಬರ ಕ್ಲಿನಿಕ್ ಲೈಸೆನ್ಸ್ ರದ್ದುಗೊಳಿಸಲು ಕರ್ನಾಟಕ ಮೆಡಿಕಲ್ ಕೌನ್ಸಿಲ್ ಆದೇಶ ನೀಡಿದೆ.
ವಿಜಯನಗರದ ಮೂಡಲಪಾಳ್ಯದಲ್ಲಿರುವ ಸಾಗರ್ ಕ್ಲಿನಿಕ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದ ಡಾ. ರಾಜು ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡದೆ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ಮೂಲಕ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಕೂಡಾ ಮಾಡುತ್ತಿದ್ದರು. ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ಆಸ್ಪತ್ರೆಗಳ ಹಣದ ದಾಹವನ್ನು ವಿವರಿಸುತ್ತಿದ್ದ ಡಾ. ರಾಜು, ಕೊರೋನಾಗೆ ಹೆದರುವ ಅಗತ್ಯವಿಲ್ಲ, ಅದೊಂದು ಸಾಧಾರಣ ಜ್ವರ, ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರದ ಅಗತ್ಯವೇ ಇಲ್ಲ ಎಂದು ಹೇಳುತ್ತಿದ್ದರು.
ಡಾ. ರಾಜು ಅವರ ಸಲಹೆಗಳು ಕೊರೋನಾ ಬಗ್ಗೆ ಆತಂಕ ಹೊಂದಿದವರಿಗೆ ಸಾಕಷ್ಟು ಪ್ರಯೋಜನವಾಗಿತ್ತು. ಅದೆಷ್ಟೋ ಮಂದಿ ಡಾ. ರಾಜು ಅವರ ಬಳಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು ಕೂಡಾ. ಆದರೆ ಕೆಲ ದಿನಗಳ ಹಿಂದೆ ಡಾ.ರಾಜು ಅವರ ವಿರುದ್ಧ ವಿರೋಧದ ದನಿ ಕೇಳಿ ಬಂದಿತ್ತು. ಅದರಲ್ಲೂ ದೊಡ್ಡ ದೊಡ್ಡ ಆಸ್ಪತ್ರೆಗಳ ಮಂದಿಯೇ ದನಿ ಎತ್ತಿದ್ದರು. ಪತ್ರಿಕೆಗಳಲ್ಲಿ ಅವರ ವಿರುದ್ಧ ಲೇಖನ ಬರೆಸುವ ಕೆಲಸ ಕೂಡಾ ನಡೆದಿತ್ತು.
ಈ ವೇಳೆ ಪ್ರತಿಕ್ರಿಯಿಸಿದ್ದ ಡಾ.ರಾಜು ಮಾಸ್ಕ್ ಹಾಕಿಕೊಳ್ಳದೆ, ಸ್ಯಾನಿಟೈಸರ್ ಬಳಸದೆ ರೋಗಿಗಳಿಗೆ ಚಿಕಿತ್ಸೆ ನೀಡುವುದು ನನ್ನ ವೈಯುಕ್ತಿಕ ಆಯ್ಕೆ, ಒಂದು ವೇಳೆ ಮಾಸ್ಕ್ ಹಾಕದೇ ಅಪಾಯವಾಗುವುದಿದ್ದರೆ ನನ್ನ ಮೇಲೆಯೇ ಆಗುತ್ತದೆ. ಇಂತಹ ಸಂದರ್ಭದಲ್ಲಿ ಮುಖ್ಯವಾಗಿ ಬೇಕಾಗಿರುವುದು ರೋಗಿಗಳಿಗೆ ಧೈರ್ಯ ತುಂಬುವ ಕೆಲಸ. ರೋಗಿಗಳು ಮನೆಯಲ್ಲಿ ಇರುವಾದ ಮಾಸ್ಕ್ ಹಾಕಿಕೊಳ್ಳುವುದು ಬೇಡ, ಹೊರಗಡೆ ಬಂದಾಗ ಮಾತ್ರ ಹಾಕಿಕೊಳ್ಳಬೇಕು ಎಂದು ಹೇಳುತ್ತಿದ್ದೇನೆ. ನನ್ನ ಕ್ಲಿನಿಕ್ ನಲ್ಲಿ ವೈದ್ಯರು ಸೇರಿ 5 ಮಂದಿ ಕೆಲಸ ಮಾಡುತ್ತಿದ್ದೇವೆ. ಯಾರೂ ಕೂಡಾ ಕೊರೋನಾ ಪರೀಕ್ಷೆಗೆ ಒಳಗಾಗಿಲ್ಲ. ಅವರಿಗೆಲ್ಲಾ ಕೊರೋನಾ ಬಂದು ಹೋಗಿರಬಹುದು. ಜನ ಕೂಡಾ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಾರಿದ್ದರು.
ಯಾವಾಗ ಇವರ ವಿರುದ್ಧ ಅಸಮಾಧಾನದ ಅಲೆ ಶುರುವಾಯ್ತೋ, ಎಚ್ಚೆತ್ತುಕೊಂಡಿರುವ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಡಾ. ರಾಜು ಅವರ ರಿಜಿಸ್ಟ್ರೇಷನ್ ರದ್ದುಗೊಳಿಸಲು ಆದೇಶಿಸಿದೆ. ಇದರ ಬೆನ್ನಲ್ಲೇ ಆರೋಗ್ಯಾಧಿಕಾರಿಗಳು ಸಾಗರ್ ಕ್ಲಿನಿಕ್ ಗೆ ಬೀಗ ಹಾಕಲು ಮುಂದಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅನೇಕರು ಇದು ಮೆಡಿಕಲ್ ಮಾಫಿಯಾದ ಕೆಲಸ ಎಂದು ದೂರಿದ್ದಾರೆ.
Discussion about this post