ರಾಮನಗರ : ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಇನ್ನು ಕೆಲವೇ ಗಂಟೆಗಳು ಬಾಕಿ. ಕೊರೋನಾ ಆತಂಕ ಮತ್ತು ಸರ್ಕಾರದ ನಿರ್ಬಂಧದ ನಡುವೆ ಪಾದಯಾತ್ರೆ ನಡೆಸಿಯೇ ಸಿದ್ದ ಅಂದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದಕ್ಕೆ ಅಂತಿಮ ಸಿದ್ದತೆಯಲ್ಲಿ ತೊಡಗಿದ್ದಾರೆ.
ಅದಕ್ಕೂ ಮುನ್ನ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟಿರುವ ಡಿಕೆ ಶಿವಕುಮಾರ್ ಪಾದಯಾತ್ರೆ ಯಶಸ್ವಿಗಾಗಿ ಪ್ರಾರ್ಥಿಸಿದ್ದಾರೆ. ಕಬ್ಬಾಳಮ್ಮ,, ಬೆಂಗಳೂರು ನಗರ ದೇವತೆ ಶ್ರೀ ಅಣ್ಣಮ್ಮ ದೇವಿ ದೇವಸ್ಥಾನಗಳಲ್ಲಿ ಈಗಾಗಲೇ ಪ್ರಾರ್ಥನೆ ಸಲ್ಲಿಸಿರುವ ಅವರು ಮಸೀದಿ ಹಾಗೂ ಚರ್ಚ್ ನಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದಾದ ಬಳಿಕ ತಮ್ಮ ನಿವಾಸದಲ್ಲಿ ಶಾಸಕರೊಂದಿಗೆ ಸಭೆ ನಡೆಸಿದ ಡಿಕೆಶಿವಕುಮಾರ್ ನಾಳೆಯ ನಡಿಗೆ ಕುರಿತಂತೆ ಮಾಹಿತಿಗಳು ಹಂಚಿಕೊಂಡಿದ್ದಾರೆ.
ಈ ನಡುವೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರು ಡಿಕೆ ಶಿವಕುಮಾರ ಅವರನ್ನು ಭೇಟಿಯಾಗಿದ್ದು,, ಸರ್ಕಾರದ ಮಾರ್ಗಸೂಚಿಯಂತೆ ಪಾದಯಾತ್ರೆಗೆ ಅನುಮತಿ ಇಲ್ಲ ಅಂದಿದ್ದಾರೆ. ಜೊತೆಗೆ ನಿಯಮ ಮೀರಿ ಪಾದಯಾತ್ರೆ ಮಾಡಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಇನ್ನು ಡಿಕೆಶಿಯವರಿಗೆ ಜಿಲ್ಲಾಡಳಿತ ನೋಟೀಸ್ ಜಾರಿ ಮಾಡಿದ್ದು, ಕರ್ಫ್ಯೂ ನಡುವೆ ಪಾದಯಾತ್ರೆ ಮಾಡಬೇಡಿ ಎಂದು ಸೂಚಿಸಲಾಗಿದೆ. ಆದರೆ ಇದಕ್ಕೆ ಡಿಕೆಶಿ ಸೆಡ್ಡು ಹೊಡೆದಿದ್ದು, ನೊಟೀಸ್ ಕೊಟ್ಟಿದ್ದಾರೆ ಕೊಡ್ಲಿ ಅಂದಿದ್ದಾರೆ.
Discussion about this post