ಮಾಜಿ ಸಚಿವ ಡಿಕೆ ಶಿವಕುಮಾರ್ 317 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಅನ್ನುವ ಇಡಿ ಅಧಿಕಾರಿಗಳ ಆರೋಪ ಕುರಿತಂತೆ ಡಿಕೆ ಸುರೇಶ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಡಿಕೆಶಿಯವರಿಗೆ ನ್ಯಾಯಾಲಯ ಇಡಿ ಕಸ್ಟಡಿ ವಿಧಿಸಿದ ಬಳಿಕ ಮಾತನಾಡಿದ ಸಂಸದ ಸುರೇಶ್, ನ್ಯಾಯಾಲಯದಲ್ಲಿ ಕೆಲವೊಂದು ಆರೋಪಗಳನ್ನು ಇಡಿ ಅಧಿಕಾರಿಗಳು ಮಾಡಿದ್ದಾರೆ. 300ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅವೆಲ್ಲವೂ ಸುಳ್ಳು ಆರೋಪ. ಒಂದು ವೇಳೆ ಅಧಿಕಾರಿಗಳ ಆರೋಪ ಸತ್ಯವಾಗಿದ್ದಾರೆ ಬ್ಯಾಂಕ್ ಖಾತೆ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಿ ಎಂದು ಸವಾಲು ಹಾಕಿದ್ದಾರೆ.
ಈ ಹಿಂದೆ ಆದಾಯ ತೆರಿಗೆ ಇಲಾಖೆಯವರು 87 ಕಡೆ ದಾಳಿ ಮಾಡಿ ಎಲ್ಲವೂ ಡಿಕೆ ಶಿವಕುಮಾರ್ ಅವರಿಗೆ ಸೇರಿದ ಆಸ್ತಿ ಅಂದಿದ್ದರು. ಅದೇ ರೀತಿಯಲ್ಲಿ ಇದೀಗ ಇಡಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ.
ರಾಜಕೀಯ ಕಾರಣಗಳನ್ನು ಇಟ್ಟುಕೊಂಡು ಇಲ್ಲ ಸಲ್ಲದ ಆರೋಪಗಳನ್ನು ಇಡಿ ಅದಿಕಾರಿಗಳು ನ್ಯಾಯಾಲಯದಲ್ಲಿ ಮಾಡಿದ್ದಾರೆ. 200 ಕೋಟಿ ನಗದು ಅದು ಎಲ್ಲಿತ್ತು ಗೊತ್ತಿಲ್ಲ, 300 ಕೋಟಿ ಹಣ, ಅದೆಲ್ಲಿದೆ ಗೊತ್ತಿಲ್ಲ. ಇನ್ನು 800 ಕೋಟಿ ಮೌಲ್ಯದ ಆಸ್ತಿ ಬಗ್ಗೆ ಪ್ರಸ್ತಾಪಿಸಲಾಗಿದೆ. ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಶಿವಕುಮಾರ್ ಅವರೇ 800 ಕೋಟಿ ಆಸ್ತಿಯನ್ನು ಘೋಷಿಸಿದ್ದಾರೆ.
ಹಾಗಂತ ಯಾವುದೇ ಆಸ್ತಿಗಳು ಅಕ್ರಮವಾಗಿ ಮಾಡಿಲ್ಲ, ಈ ಸಂಬಂಧ ಡಿಕೆ ಶಿವಕುಮಾರ್ ಭ್ರಷ್ಟಚಾರದ ಆರೋಪಗಳಿಲ್ಲ. ಈಗ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದಾಖಲೆಗಳು ಮತ್ತು ಆದಾಯ ತೆರಿಗೆ ಇಲಾಖೆ ದಾಖಲೆಗಳನ್ನು ಇಟ್ಟುಕೊಂಡು ರಾಜಕೀಯ ಕುಮ್ಮಕ್ಕಿನಿಂದ ಇಡಿ ಅಧಿಕಾರಿಗಳು ಮಾತನಾಡುತ್ತಿದ್ದಾರೆ ಎಂದು ಸುರೇಶ್ ದೂರಿದರು.
ಯಾರದ್ದೋ ಆಸ್ತಿ, ಖಾತೆಗಳನ್ನು ನಮ್ದು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ನ್ಯಾಯಕ್ಕೆ ಜಯ ಸಿಗುತ್ತದೆ. ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಸುರೇಶ್ ಹೇಳಿದರು.
Discussion about this post