ಉಪಚುನಾವಣೆಗಳನ್ನು ಗೆಲ್ಲಿಸುವುದರಲ್ಲಿ ನಿಸ್ಸೀಮರಾಗಿದ್ದ ಡಿಕೆ ಶಿವಕುಮಾರ್ ಈ ಬಾರಿಯ ಉಪಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಿತ್ತು.
ಅದರಲ್ಲೂ ಮೈತ್ರಿ ಸರ್ಕಾರ ಉರುಳಿ ಬೀಳುತ್ತಿದ್ದಂತೆ ಕೆಂಡವಾಗಿದ್ದ ಡಿಕೆಶಿ, ನನ್ನ ಮತ್ತು ಎಂಟಿಬಿ ನಾಗರಾಜು ಭೇಟಿ ಹೊಸಕೋಟೆ ಚುನಾವಣೆ ರಣರಂಗದಲ್ಲಿ ಎಂದು ಹೇಳಿದ್ದರು.
ಇದಕ್ಕೆ ಪ್ರತಿಯಾಗಿ ಸವಾಲು ಸ್ವೀಕರಿಸಿದ್ದ ಎಂಟಿಬಿ, ನನ್ನ ಕ್ಷೇತ್ರದಲ್ಲಿ ಬಂದು ಡಿಕೆಶಿ ತೊಡೆ ತಟ್ಟಲಿ ನೋಡೋಣ ಅಂದಿದ್ದರು.
ಡಿಕೆ ಶಿವಕುಮಾರ್ಗೆ ಪ್ರತಿಸವಾಲು ಹಾಕಿದ್ದ ಅವರು ನನ್ನ ಕ್ಷೇತ್ರಕ್ಕೆ ಬಂದು ಡಿ.ಕೆ.ಶಿವಕುಮಾರ್ ತೊಡೆ ತಟ್ಟಲಿ, ಆ ರೀತಿ ತೊಡೆ ತಟ್ಟಿರುವವರನ್ನು ನಾನು ಬಹಳ ಜನರನ್ನು ನೋಡಿದ್ದೇನೆ ಅಂದಿದ್ದರು.
ಡಿಕೆ ಶಿವಕುಮಾರ್ ಆಗ ಹೇಳಿದ ಮಾತುಗಳನ್ನು ಕೇಳಿದ ಕಾಂಗ್ರೆಸ್ ನಾಯಕರು ಈ ಬಾರಿ ಗೆಲುವು ನಮ್ಮದೇ ಅಂದುಕೊಂಡಿದ್ದರು.
ಆದರೆ ಬದಲಾದ ಪರಿಸ್ಥಿತಿಯಲ್ಲಿ ಇಡಿ ಬಂಧನಕ್ಕೆ ಒಳಗಾದ ಡಿಕೆಶಿ ಉಪಚುನಾವಣೆ ಸಂದರ್ಭದಲ್ಲಾದರೂ ಜಾಮೀನು ಪಡೆದು ಹೊರಗೆ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇಡಿ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡುತ್ತದೆ ಅನ್ನುವ ನಿರೀಕ್ಷೆ ಎಲ್ಲರಲ್ಲಿತ್ತು.
ಆದರೆ ಇಂದು ಜಾಮೀನು ಅರ್ಜಿ ಕುರಿತಂತೆ ಆದೇಶ ಪ್ರಕಟಿಸಿರುವ ನ್ಯಾಯಾಲಯ ಜಾಮೀನು ಕೊಡಲು ಸಾಧ್ಯವಿಲ್ಲ ಅಂದಿದೆ.
ಹೀಗಾಗಿ ಗುಂಡ್ಲುಪೇಟೆ, ಬಳ್ಳಾರಿ ಸೇರಿದಂತೆ ಅನೇಕ ಉಪಚುನಾವಣೆಗಳನ್ನು ಗೆಲ್ಲಿಸಿಕೊಟ್ಟ ಡಿಕೆಶಿ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಈ ಬಾರಿ ಮತ್ತೊಂದು ಉಪಚುನಾವಣೆಯನ್ನು ಎದುರಿಸಬೇಕಾಗಿದೆ.
Discussion about this post