ದಾವಣಗೆರೆ : ಬೆಂಗಳೂರಿನಲ್ಲಿ ಇಷ್ಟು ದಿನಗಳ ಕಾಲ ಅಬ್ಬರಿಸುತ್ತಿದ್ದ ಕೊರೋನಾ ಸರ್ಕಾರದ ಲೆಕ್ಕಚಾರ ಪ್ರಕಾರ ಹತೋಟಿಗೆ ಬಂದಿದೆ. ಬಿಬಿಎಂಪಿಯ ಕಳ್ಳ ಲೆಕ್ಕಾಟದಿಂದ ಇದೀಗ ಕೊರೋನಾ ಸಂಪೂರ್ಣ ಹಿಡಿತದಲ್ಲಿದೆ. ಒಂದು ವೇಳೆ ತಜ್ಞರ ಸಲಹೆಯಂತೆ ದಿನಕ್ಕೆ ಲಕ್ಷ ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದರೆ ಈಗ್ಲೂ ಕೊರೋನಾ ಸೋಂಕಿತರ ಸಂಖ್ಯೆ ವಿಪರೀತವಾಗಿರುತ್ತದೆ.
ಈ ನಡುವೆ ಹಳ್ಳಿಗಳಲ್ಲಿ ಕೊರೋನಾ ಸೋಂಕು ಅಬ್ಬರಿಸಲಾರಂಭಿಸಿದ್ದಾರೆ. ಸಿಟಿ ಬಿಟ್ಟು ಹಳ್ಳಿಗಳಿಗೆ ಬಂದ ಮಂದಿ ನಿರ್ಲಕ್ಷ್ಯ ವಹಿಸಿದ ಕರ್ಮಕ್ಕೆ ಇದೀಗ ಹಳ್ಳಿಗಳು ಸಂಕಷ್ಟಕ್ಕೆ ಒಳಗಾಗಿದೆ. ಸಿಟಿಗಳಿಂದ ಬಂದವರು 14 ದಿನಗಳ ಕಾಲ ಕಟ್ಟು ನಿಟ್ಟಾಗಿ ಕ್ವಾರಂಟೈನ್ ಗೆ ಒಳಗಾಗಿರುತ್ತಿದ್ರೆ ಸಮಸ್ಯೆ ಈ ಮಟ್ಟಿಗೆ ಉಲ್ಭಣಿಸುತ್ತಿರಲಿಲ್ಲ.
ಈ ನಡುವೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕೊರೋನಾ ಸುನಾಮಿ ಶುರುವಾಗಿದೆ. ಮೊನ್ನೆ ಮೊನ್ನೆ 200ರ ಗಡಿ ದಾಟದ ಸಕ್ರಿಯ ಪ್ರಕರಣ ಸಂಖ್ಯೆ ಇದೀಗ ಸಾವಿರದ ಗಡಿ ದಾಟಿದೆ. ಜಿಲ್ಲೆಯಲ್ಲಿ ಬರೋಬ್ಬರಿ 38ಕ್ಕೂ ಹೆಚ್ಚು ಹಳ್ಳಿಗಳು ಸೋಂಕಿಗೆ ತುತ್ತಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ನ್ಯಾಮತಿ ತಾಲೂಕಿನ ರಾಮೇಶ್ವರದಲ್ಲಿ 70ಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಇದೇ ನ್ಯಾಮತಿ ತಾಲೂಕಿನ ಮಾದನಬಾವಿಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು. ಮನೆ ಮನೆಗೆ ಮೆಡಿಕಲ್ ಕಿಟ್ ನೀಡಲು ಜಿಲ್ಲಾ ಪಂಚಾಯತಿ ನಿರ್ಧರಿಸಿದೆ.
ಇದು ದಾವಣಗೆರೆಯ ಹಳ್ಳಿಗಳ ಕಥೆ ಮಾತ್ರವಲ್ಲದೆ, ಹುಡುಕಿದರೆ ಕರ್ನಾಟಕ ಪ್ರತೀ ಜಿಲ್ಲೆಯ ಹಳ್ಳಿಗಳ ಕಥೆ ಭಿನ್ನವಾಗಿಲ್ಲ.
Discussion about this post