ಬೇಲಿ ಹಾಕದಿದ್ರೆ ಹಸುಗಳು ಹಸಿರು ಗಿಡಗಳನ್ನು ಖಂಡಿತಾ ತಿನ್ನುತ್ತವೆ. ಹಾಗಂತ ಪಶುಪಾಲನೆಯಿಂದ ಜೀವನ ನಡೆಸುವವರ ಮೇಲೆ ದಬ್ಬಾಳಿಕೆ ನಡೆಸುವುದು, ದರ್ಪ ತೋರಿಸೋದು ಸರಿಯೇ
ಹಾಸನ : ಪೊಲೀಸ್ ಠಾಣೆ ಆವರಣದಲ್ಲಿ ಬೆಳೆಸಿದ್ದ ಗಿಡಗಳನ್ನು ತಿಂದು ಹಾಕಿವೆ ಅನ್ನುವ ಕಾರಣಕ್ಕೆ ಎರಡು ಹಸುಗಳನ್ನು ಪೊಲೀಸರೇ ಕಟ್ಟಿ ಹಾಕಿದ ಘಟನೆ ಶನಿವಾರ ಬೇಲೂರು ನೆಹರೂ ನಗರದಲ್ಲಿ ನಡೆದಿದೆ.
ನೆಹರೂ ನಗರದಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಮೇಯುತ್ತಿದ್ದ ಹಸುಗಳನ್ನು ಪೊಲೀಸ್ ಅಧಿಕಾರಿ ಯೋಗೀಶ್ ಆದೇಶದಂತೆ ಸಿಬ್ಬಂದಿಗಳು ಕಟ್ಟಿ ಹಾಕಿದ್ದಾರೆ. ಸಂಜೆಯಾದರೂ ಹಸುಗಳು ಮನೆಗೆ ಮರಳದ ಹಿನ್ನಲೆಯಲ್ಲಿ ಮಾಲೀಕರಾದ ಸಿಂಗಮ್ಮ ಮತ್ತು ಸಿದ್ದಮ್ಮ ಎಂಬ ವೃದ್ಧೆಯರು ಹುಡುಕಾಟ ಪ್ರಾರಂಭಿಸಿದ್ದಾರೆ. ಆಗ ಹಸುಗಳನ್ನು ಪೊಲೀಸ್ ಠಾಣೆಯಲ್ಲಿ ಕಟ್ಟಿ ಹಾಕಿರುವ ಸುದ್ದಿ ಗೊತ್ತಾಗಿದೆ.
ಆದಾದ ಬಳಿಕ ಹಸುಗಳನ್ನು ಬಿಟ್ಟು ಕಳುಹಿಸುವಂತೆ ಪೊಲೀಸರನ್ನು ಮನವಿ ಮಾಡಿದ್ದಾರೆ. ಆದರೆ ಪೊಲೀಸರು ಇದಕ್ಕೆ ಒಪ್ಪಿಲ್ಲ. ಸಮಯಕ್ಕೆ ಸರಿಯಾಗಿ ಹಾಲು ಕರೆಯದಿದ್ರೆ ಕೆಚ್ಚಲು ಬಾವು ಬಾರುತ್ತದೆ, ಪಶುಪಾಲನೆಯಿಂದ ನಮ್ಮ ಜೀವನ ನಡೆಯುತ್ತಿದೆ ಎಂದು ಬೇಡಿದರೂ ರಾತ್ರಿ 10.30ರ ತನಕ ಹಸುಗಳನ್ನು ಕೂಡಿ ಹಾಕಿದ್ದರು ಎಂದು ವೃದ್ಧೆಯರು ನೋವು ತೋಡಿಕೊಂಡಿದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಸಿಪಿಐ ಯೋಗಿಶ್ ನಮ್ಮ ಬಗ್ಗೆ ಕರುಣಿಯನ್ನೇ ತೋರಲಿಲ್ಲ ಅನ್ನುವುದು ವೃದ್ಧೆಯರ ಅಳಲು.
ಆದರೆ ಸಿಪಿಐ ಯೋಗಿಶ್ ಪ್ರತಿಕ್ರಿಯೆ ಕೂಡಾ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಬೇಲೂರು ಪೊಲೀಸ್ ಠಾಣೆಯಲ್ಲಿ ಹಲವಾರು ವರ್ಷಗಳಿಂದ ಠಾಣಾ ಆವರದಲ್ಲಿ ಗಿಡಗಳನ್ನು ಬೆಳೆಸಲಾಗಿದೆ. ಕೆಲವು ತಿಂಗಳುಗಳಿಂದ ಹಸುಗಳು ಬಂದು ಗಿಡಗಳನ್ನು ತಿಂದು ಹಾಕುತ್ತವೆ. ನಮ್ಮ ಮನವಿಗೆ ಕ್ಯಾರೆ ಅನ್ನದ ಹಿನ್ನಲೆಯಲ್ಲಿ ಹಸುಗಳನ್ನು ಕಟ್ಟಿ ಹಾಕಲಾಯ್ತು. ಮನವಿ ಬಳಿಕ ಬಿಟ್ಟು ಕಳುಹಿಸಲಾಗಿದೆ ಅಂದಿದ್ದಾರೆ.
ಪೊಲೀಸರ ಪ್ರತಿಕ್ರಿಯೆ ವಿಚಿತ್ರವಾಗಿದೆ. ಗಿಡ ನೆಟ್ಟ ಮೇಲೆ ಬೇಲಿ ಹಾಕಬೇಕು ತಾನೇ. ಮೊದಲೇ ದನಗಳಿಗೆ ಮೇಯಲು ಜಾಗವಿಲ್ಲ. ಇರುವ ಜಾಗವನ್ನು ಕೈಗಾರಿಕೆಗಳಿಗೆ, ವಾಣಿಜ್ಯ ಬಳಕೆಗೆ ಕೊಟ್ಟಾಗಿದೆ. ದನ ಸಾಕಿ, ಹಾಲು ಮಾರಾಟ ಮಾಡಿ ಜೀವನ ಮಾಡುವವರು ಇನ್ನೇನು ಮಾಡಲು ಸಾಧ್ಯ. ಕಳ್ಳತನ ತಡೆಯಲು ಸಿಸಿಟಿವಿ ಹಾಕಿ ಅನ್ನುವ ಪೊಲೀಸರಿಗೆ, ಗಿಡ ನೆಟ್ಟು ದನ ತಿನ್ನದಂತೆ ಬೇಲಿ ಹಾಕಬೇಕು ಅನ್ನುವುದು ಗೊತ್ತಾಗದೆ ಹೋಯ್ತೇ..?
Discussion about this post