ಬೆಂಗಳೂರು : ರಾಜ್ಯದಲ್ಲಿ ಅಬ್ಬರಿಸುತ್ತಿರುವ ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಯಾವಾಗ ಏನು ಕ್ರಮ ಕೈಗೊಳ್ಳುತ್ತದೆ ಅನ್ನುವುದನ್ನು ಅದ್ಯಾವ ದಡ್ಡರಿಗೂ ಊಹಿಸಬಹುದು. ಉಪಚುನಾವಣೆ ಪ್ರಚಾರಕ್ಕೆ ತೆರೆ ಬೀಳದ ಹೊರತು ಅದ್ಯಾವುದೇ ಕಠಿಣ ಕ್ರಮಗಳು ಜಾರಿಗೆ ಬರೋದಿಲ್ಲ, ಟಾಸ್ಕ್ ಪೋರ್ಸ್ ಸಮಿತಿಯ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಎಲ್ಲರೂ ಹೇಳಿದ್ದರು. ಹಾಗೇ ಆಗಿದೆ.
ಕೊರೋನಾ ಸೋಂಕಿನ ಎರಡನೆ ಅಲೆ ಶುರುವಾದ ವೇಳೆಯೇ ಕೈಗೊಳ್ಳ ಬೇಕಾದ ಕಠಿಣ ಕ್ರಮಗಳನ್ನು ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಮೇಲೆ ಕೈಗೊಳ್ಳಲಾಗಿದೆ. ಜೊತೆಗೆ ಬಿಜೆಪಿಯ ರಾಜ್ಯ ನಾಯಕರ ಮನೆಯ ಕಾರ್ಯಕ್ರಮವೊಂದು ಮುಗಿಯಲು ಕಾಯಲಾಗಿತ್ತು ಎನ್ನಲಾಗಿದೆ.
ಇಂದು ಸಾರ್ವಜನಿಕ ಸಮಾರಂಭ ಕುರಿತಂತೆ ಬಿಗಿ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಧಾರ್ಮಿಕ ಆಚರಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಆದೇಶವನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ಮತ್ತು 60 ಹಾಗೂ ಐಪಿಎಸ್ ಸೆಕ್ಷನ್ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಹೊರಡಿಸಿರುವ ಆದೇಶದ ಪ್ರಕಾರ, ತೆರೆದ ಪ್ರದೇಶದಲ್ಲಿ ನಡೆಯುವ ರಾಜಕೀಯ ಸಮಾರಂಭಗಳಲ್ಲಿ 200 ಮಂದಿಗೆ ಅನುಮತಿ ನೀಡಲಾಗಿದೆ. ಅಂತ್ಯಕ್ರಿಯೆಯಲ್ಲಿ 25 ಮಂದಿ ಹಾಗೂ ಇತರ ಸಮಾರಂಭಗಳು ತೆರೆದ ಪ್ರದೇಶದಲ್ಲಾದರೆ 50 ಮಂದಿ ಹಾಗೂ ಸಭಾಂಗಣ, ಹಾಲ್ ಸೇರಿ ಮುಚ್ಚಿದ ಪ್ರದೇಶದಲ್ಲಾದರೆ 25 ಮಂದಿ ಪಾಲ್ಗೊಳ್ಳಬಹುದಾಗಿದೆ.
ಮದುವೆ ತೆರೆದ ಪ್ರದೇಶದಲ್ಲಿ ನಡೆಸುವುದಾದರೆ 200 ಮಂದಿಯನ್ನು ಸೇರಿಸಬಹುದು, ಮುಚ್ಚಿದ ಪ್ರದೇಶದಲ್ಲಿ 100 ಮಂದಿ ಸೇರಿಸಬಹುದಾಗಿದೆ.
Discussion about this post