ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಸಿಕ್ಕಾಪಟ್ಟೆ ಕಡಿಮೆಯಾಗುತ್ತಿದೆ. ನಾವು ಘೋಷಿಸಿದ ಕಠಿಣ ಕ್ರಮಗಳು ಫಲ ಕೊಟ್ಟಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಎದೆ ತಟ್ಟಿಕೊಂಡಿದ್ದರು. ಅದರಲ್ಲೂ ನಾವು ಕೈಗೊಂಡ ಕ್ರಮದಿಂದಲೇ ಬೆಂಗಳೂರಿನಲ್ಲಿ ಸೋಂಕಿನ ಸುನಾಮಿ ತಗ್ಗಿದೆ ಎಂದು ಬೀಗಿದ್ದರು. ಅವತ್ತು ಯಡಿಯೂರಪ್ಪ ಆಡಿದ ಮಾತುಗಳನ್ನು ಕೇಳಿದ್ರೆ ಕೊರೋನಾ ವೈರಸ್ ರಾಜ್ಯ ಸರ್ಕಾರ ಮಾತಿಗೆ ಸಮ್ಮತಿಸಿದೆ ಅನ್ನುವಂತಿತ್ತು.
ಆದರೆ ರಾಜ್ಯ ಸರ್ಕಾರ ಕೇಳಿದ್ದು ಪಕ್ಕಾ ಸುಳ್ಳು ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕು ಇಳಿಕೆಯಾಗಲು ಕಾರಣವಾಗಿರೋದು ಯಾವುದೇ ಕಠಿಣ ಕ್ರಮದಿಂದ ಅಲ್ಲ. ಬದಲಾಗಿ ಬೆಂಗಳೂರಿನಲ್ಲಿ ಟೆಸ್ಟಿಂಗ್ ಪ್ರಮಾಣವನ್ನು ತೀರಾ ಕಡಿಮೆಗೊಳಿಸಲಾಗಿದೆ. ಬೆಂಗಳೂರು ಒಂದರಲ್ಲೇ ಒಂದು ಲಕ್ಷ ಟೆಸ್ಟ್ ನಡೆಯಬೇಕು ಎಂದು ತಜ್ಞರು ಆಗ್ರಹಿಸಿದ್ದರು. ಆದರೆ ರಾಜ್ಯ ಸರ್ಕಾರ ಒಂದು ಲಕ್ಷದ ಗಡಿಯತ್ತ ಸುಳಿದಿರಲಿಲ್ಲ. 80 ಸಾವಿರದಷ್ಟಿದ್ದ ಟೆಸ್ಟಿಂಗ್ ನಿಧಾನವಾಗಿ 60 ಸಾವಿರಕ್ಕೆ ಬಂದು ನಿಂತಿತ್ತು. ಇದೀಗ ಅದು 40 ರಿಂದ 48 ಸಾವಿರಕ್ಕೆ ಕುಸಿದಿದೆ. ಒಂದು ವೇಳೆ ಕೇರಳ ಮಾದರಿಯಲ್ಲಿ ಟೆಸ್ಟಿಂಗ್ ಪ್ರಮಾಣವನ್ನು ಏರಿಸಿದ್ರೆ ಮತ್ತೆ ಸೋಂಕಿತರ ಸಂಖ್ಯೆಯೂ ಏರುವುದು ಖಚಿತ.
ಮೂಲಗಳ ಪ್ರಕಾರ ಬೆಂಗಳೂರಿನ ಮಾನ ಉಳಿಸಿಕೊಳ್ಳುವ ಸಲುವಾಗಿ ಈ ಟೆಸ್ಟಿಂಗ್ ಪ್ರಮಾಣವನ್ನು ತಗ್ಗಿಸಲಾಗಿದೆ. ಈ ಹಿಂದೆ ಒಬ್ಬ ಸೋಂಕಿತರು ಪತ್ತೆಯಾದ್ರೆ 20 ಪ್ರಾಥಮಿಕ ಸಂಪರ್ಕಿತರು ಹಾಗೂ ಸೆಕೆಂಡರಿ ಸಂಪರ್ಕಿತರನ್ನು ಟೆಸ್ಟ್ ಗೆ ಒಳಪಡಿಸಲಾಗುತ್ತಿತ್ತು. ಆದರೆ ಈಗ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕಿತರನ್ನು ಬಿಬಿಎಂಪಿ ಮರೆತು ಬಿಟ್ಟಿದೆ.
ಇನ್ನು ಸಾವಿನ ಸಂಖ್ಯೆಯೂ ಕೂಡಾ ಕಡಿಮೆಯಾಗಿದೆ ಅಂದ್ರೆ ಅದಕ್ಕೆ ಕಾರಣ, ಸುಧಾರಿಸಿರುವ ಆರೋಗ್ಯ ವ್ಯವಸ್ಥೆ. ಎರಡನೆ ಅಲೆಯ ಪ್ರಾರಂಭದಲ್ಲಿ ಬೆಡ್ ಸಿಗುತ್ತಿರಲಿಲ್ಲ, ಆಕ್ಸಿಜನ್ ಸಿಗುತ್ತಿರಲಿಲ್ಲ, ಅಂಬ್ಯುಲೆನ್ಸ್ ಸಿಗುತ್ತಿರಲಿಲ್ಲ. ಆದರೆ ಇದೀಗ ಸಂಪೂರ್ಣವಾಗಿ ಅಲ್ಲದಿದ್ದರೂ ಒಂದಿಷ್ಟು ಮಟ್ಟಿಗೆ ಪರಿಸ್ಥಿತಿ ಸುಧಾರಿಸಿದೆ.ಬೆಡ್ ಬ್ಲಾಕ್ ದಂಧೆಯನ್ನು ತಡೆ ಹಿಡಿದ ಕಾರಣ ಅಗತ್ಯ ಉಳ್ಳವರಿಗೆ ಬೆಡ್ ಸಿಗುತ್ತಿದೆ. ತುರ್ತಾಗಿ ಆಕ್ಸಿಜನ್ ಬೇಕಾದವರಿಗೆ ಮನೆ ಬಾಗಿಲಿಗೆ ಆಕ್ಸಿಜನ್ ತಲುಪಿಸಲಾಗುತ್ತಿದೆ. ಜೊತೆಗೆ ಆಸ್ಪತ್ರೆಗಳಿಗೂ ಆಕ್ಸಿಜನ್ ಪೂರೈಕೆಯನ್ನು ಸರಾಗಗೊಳಿಸಲಾಗಿದೆ. ಈ ಕಾರಣದಿಂದ ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ.
ಹಾಗಂತ ಲಾಕ್ ಡೌನ್ ಪರಿಣಾಮ ಬೀರಿಲ್ಲವೇ ಖಂಡಿತಾ ಬೀರಿದೆ. ರಾಜ್ಯ ಸರ್ಕಾರ ಬೀಗುವ ಮಟ್ಟಿಗೆ ಬೀರಿಲ್ಲ. ಈ ಕಾರಣದಿಂದಲೇ ಸೋಂಕಿನ ಸಂಖ್ಯೆ ಇಳಿಕೆಯಾಯ್ತು ಅನ್ನುವ ರಾಜ್ಯ ಸರ್ಕಾರ ಮಾತು ನಂಬಿ ಮಾಸ್ಕ್ ಕಿತ್ತು, ಸ್ಯಾನಿಟೈಸರ್ ಮರೆತ್ರೆ ನಿಮ್ಮ ಕಥೆ ಅಷ್ಟೇ.
Discussion about this post