ಬೆಂಗಳೂರು : ರಾಜ್ಯದಲ್ಲಿ ಎರಡನೆ ಅಲೆಯ ಕೊರೋನಾ ಸೋಂಕಿನ ಅಬ್ಬರ ಮೊದಲ ಅಲೆಯನ್ನು ಮೀರಿಸಲಿದೆ ಎಂದು ತಜ್ಞ ವೈದ್ಯರು ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ. ಇಂದು ನಡೆದ ಸಲಹಾ ಸಮಿತಿಯಲ್ಲಿ ಮಾತನಾಡಿದ ಸಮಿತಿ ಸದಸ್ಯರು, ಸಮಿತಿ ಕೊಟ್ಟ ಯಾವುದೇ ಎಚ್ಚರಿಕೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿಲ್ಲ. ಹೀಗಾಗಿ ಪರಿಸ್ಥಿತಿ ಕೈಮೀರಿದ್ದು ಲಾಕ್ ಡೌನ್ ಅನಿವಾರ್ಯತೆ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜನ ಮಾಸ್ಕ್ ಇಲ್ಲದೆ ಓಡಾಡುತ್ತಿದ್ದಾರೆ, ಜಾತ್ರೆ, ರಾಜಕೀಯ ಸಮಾರಂಭಗಳಲ್ಲಿ ಕೊರೋನಾ ನಿಯಮಗಳನ್ನು ಪಾಲಿಸುವುದೇ ಇಲ್ಲ. ಬೆಂಗಳೂರಿನಲ್ಲಿ ಜನ ಕೊರೋನಾ ಎಚ್ಚರಿಕೆಯನ್ನೇ ಮರೆತು ಬಿಟ್ಟಿದ್ದಾರೆ. ಹೀಗಾಗಿ ಎರಡನೆಯ ಅಲೆಯ ಸ್ವರೂಪ ಊಹಿಸಿಕೊಳ್ಳಲು ಸಾಧ್ಯವಿಲ್ಲ ಅಂದಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ. ಮಂಜುನಾಥ್, ಎರಡನೆ ಅಲೆಯ ಅಬ್ಬರ ತೀವ್ರವಾಗಿದೆ. ಪರಿಸ್ಥಿತಿ ನೋಡಿದರೆ ಇನ್ನು 10 ರಿಂದ 15 ದಿನಗಳಲ್ಲಿ ಬೆಂಗಳೂರಿನಲ್ಲಿ 10 ರಿಂದ 15 ಸಾವಿರ ಸೋಂಕಿತರು ದಿನವೊಂದಕ್ಕೆ ಪತ್ತೆಯಾದರೂ ಅಚ್ಚರಿ ಇಲ್ಲ. ರಾಜ್ಯಕ್ಕೆ ಲೆಕ್ಕ ಹಾಕಿದರೆ ಈ ಸಂಖ್ಯೆ 50 ಸಾವಿರ ತನಕ ಬರಬಹುದು. ಹೀಗಾಗಿ ಮುನ್ನೆಚ್ಚರಿಕೆಯೊಂದೇ ಮಾರ್ಗ ಅಂದಿದ್ದಾರೆ.
ನಾವು ಲಾಕ್ ಡೌನ್ ಮಾಡಿ, ಬಂದ್ ಮಾಡಿ ಎಂದು ಸಲಹೆ ಕೊಡುತ್ತಿಲ್ಲ. ವಾಣಿಜ್ಯ ಚಟುವಟಿಕೆಗಳು ಕೊರೋನಾ ಎಚ್ಚರಿಕೆಯೊಂದಿಗೆ ನಡೆಯಲಿ. ಬದಲಾಗಿ ಜಾತ್ರೆ, ಧಾರ್ಮಿಕ ಸಮಾರಂಭ, ರಾಜಕೀಯ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದೇವೆ. ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ಸೀಮಿತ ಮಂದಿ ಸೇರುವಂತೆ ನೋಡಿಕೊಳ್ಳಬೇಕು. ಜೊತೆಗೆ ಅಲ್ಲೀ ಮಾಸ್ಕ್ ಸಾಮಾಜಿಕ ಅಂತರ, ಸ್ಯಾನಿಟೈಸ್ ವ್ಯವಸ್ಥೆಗಳು ಕಡ್ಡಾಯವಾಗಿರಬೇಕು ಎಂದು ಮನವಿ ಮಾಡಿದ್ದಾರೆ.
ಸಲಹೆ ಚೆನ್ನಾಗಿದೆ. ಆದರೆ ಈವರೆಗೆ ನಡೆದ ಚುನಾವಣಾ ಪ್ರಚಾರ ಸಭೆಗಳನ್ನು ನೋಡಿದರೆ ರಾಜಕಾರಣಿಗಳೇ ಕೊರೋನಾ ನಿಯಮಗಳನ್ನು ಪಾಲಿಸಿಲ್ಲ. ಹಾಗಂತ ಅವರು ಒಂದು ರೂಪಾಯಿ ದಂಡವನ್ನೂ ಕಟ್ಟಿಲ್ಲ. ಮತ್ತೊಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷರ ಕುಟುಂಬದ ಕಾರ್ಯಕ್ರಮವೊಂದು ಅದ್ದೂರಿಯಾಗಿ ನಡೆದಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕ್ರಮದಲ್ಲಿ ಕೊರೋನಾ ನಿಯಮ ಅಂದ್ರೆ ಏನು ಎಂದು ಪ್ರಶ್ನಿಸುವಂತಿತ್ತು.
Discussion about this post