ಬೆಂಗಳೂರು : ದೇಶದಲ್ಲಿ ಒಮಿಕ್ರೋನ್ ಭೀತಿ ಹೆಚ್ಚಾಗಿದೆ. ಹೀಗಾಗಿ ವಿದೇಶದಿಂದ ಬರುವವರ ಮೇಲೆ ತೀವ್ರ ನಿಗಾವಹಿಸಲಾಗಿದೆ. ಅದರಲ್ಲೂ ಹೈ ರಿಸ್ಕ್ ದೇಶಗಳಿಂದ ಬರುವವರ ಬಗ್ಗೆ ಮತ್ತಷ್ಟ ನಿಗಾ ವಹಿಸಲಾಗುತ್ತಿದೆ. ಈ ನಡುವೆ ಲಂಡನ್ ನಿಂದ ಸೋಮವಾರ ಬೆಂಗಳೂರು ವಿಮಾನಕ್ಕೆ ಬಂದಿಳಿದ ಇಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಂಶವಾಹಿ ಪರೀಕ್ಷೆ ಸಲುವಾಗಿ ಇವರಿಬ್ಬರ ಮಾದರಿಯನ್ನು ಪ್ರಯೋಗಲಾಯಕ್ಕೆ ಕಳುಹಿಸಲಾಗಿದೆ. ಈ ಮೂಲಕ ಹೈರಿಸ್ಕ್ ದೇಶಗಳಿಂದ ರಾಜ್ಯಕ್ಕೆ ಆಗಮಿಸಿ ಸೋಂಕು ದೃಢಪಟ್ಟವರ ಸಂಖ್ಯೆ 9ಕ್ಕೆ ಏರಿದೆ.
ಇನ್ನು ಹೈ ರಿಸ್ಕ್ ದೇಶಗಳಿಂದ ಆಗಮಿಸಿ ಸೋಂಕು ದೃಢಪಟ್ಟ ಪ್ರಯಾಣಿಕರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಆರು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು. ಇಲ್ಲಿ ದಾಖಲಾಗುವ ಸೋಂಕಿತರು ಸ್ವಂತ ಖರ್ಚಿನಲ್ಲೇ ಚಿಕಿತ್ಸೆ ಪಡೆಯಬಹುದಾಗಿದೆ.
ಈಗಾಗಲೇ ವಿದೇಶದಿಂದ ಬಂದು ಸೋಂಕು ದೃಢಪಟ್ಟವರು ಹಾಗೂ ಒಮಿಕ್ರೋನ್ ಸೋಂಕಿತರ ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗಿದೆ.ಹಾಗಿದ್ದರೂ ಖಾಸಗಿ ಆಸ್ಪತ್ರೆಯ ಚಿಕಿತ್ಸೆಗೆ ಬೇಡಿಕೆ ಹೆಚ್ಚಿದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ನೀಡಿದ್ದು, ಬಿಬಿಎಂಪಿ ತನ್ನ ವ್ಯಾಪ್ತಿಯ 5 ಖಾಸಗಿ ಆಸ್ಪತ್ರೆಗಳನ್ನು ನಿಗದಿಗೊಳಿಸಿದೆ. ಈ ಪೈಕಿ ವಯಸ್ಕರಿಗೆ 5 ಆಸ್ಪತ್ರೆ ಹಾಗೂ 1 ಮಕ್ಕಳ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ.
ಬಿಬಿಎಂಪಿ ಆದೇಶದ ಪ್ರಕಾರ ಮಣಿಪಾಲ ಸಮೂಹ ಆಸ್ಪತ್ರೆ, ಆಪೋಲೋ ಸಮೂಹ ಆಸ್ಪತ್ರೆ, ಪೋರ್ಟಿಸ್ ಸಮೂಹ ಆಸ್ಪತ್ರೆ, ಸುಗುಣ ಆಸ್ಪತ್ರೆ, ಸಾಕ್ರಾ ಆಸ್ಪತ್ರೆ ಮತ್ತು ರೈನ್ ಬೋ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯಲಿದೆ.
ಈ ಆಸ್ಪತ್ರೆಗಳು ಕೊರೋನಾ ಸೋಂಕಿತರಿಗಾಗಿ ಪ್ರತ್ಯೇಕ ವಾರ್ಡ್ ತೆರೆಯಬೇಕು ಹಾಗೂ ಪ್ರತೀ ನಿತ್ಯ ಸೋಂಕಿತರ ಸ್ಥಿತಿಗತಿಯನ್ನು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ರಾಜ್ಯ ಪರಿವೀಕ್ಷಣಾ ಕೇಂದ್ರ ಕಳುಹಿಸಿಕೊಡಬೇಕು.
ಅಂಗವಿಕಲ ಮಗನ ಕೊಂದು ಆತ್ಮಹತ್ಯೆಗೆ ಶರಣಾದ ತಂದೆ
ಬೆಂಗಳೂರು : ಭವಿಷ್ಯದ ಆತಂಕಕ್ಕೆ ಒಳಗಾದ ತಂದೆಯೊಬ್ಬ ಅಂಧ ಹಾಗೂ ಮೂಕ ಮಗನನ್ನು ಕೊಂದು ನಂತರ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಸಂಪಗಿರಾಮನಗರದಲ್ಲಿ ನಡೆದಿದೆ. ಮೃತರನ್ನು ಸಂಪಂಗಿರಾಮ ನಗರದ 3ನೇ ಅಡ್ಡರಸ್ತೆ ನಿವಾಸಿ ಸುರೇಶ್ (40) ಹಾಗೂ ಅವರ ಪುತ್ರ ಉದಯ್ ಸಾಯಿರಾಮ್ (10) ಎಂದು ಗುರುತಿಸಲಾಗಿದೆ.
ಹಾಸನ ಜಿಲ್ಲೆಯ ಅರಸೀಕರೆಯ ಸುರೇಶ್ 15 ವರ್ಷಗಳ ಹಿಂದೆ ಲಕ್ಷ್ಮಿ ಅನ್ನುವವರನ್ನು ವಿವಾಹವಾಗಿದ್ದರು. ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದ ಇವರಿಗೆ ಸಾಯಿರಾಮ್ ಹುಟ್ಟಿದ್ದ. ಹುಟ್ಟಿನಿಂದಲೂ ಬಾಲಕನಿಗೆ ಮಾತು ಬರುತ್ತಿರಲಿಲ್ಲ, ಕಣ್ಣು ಕಾಣಿಸುತ್ತಿರಲಿಲ್ಲ. ಈ ನಡುವೆ ಬೆನ್ನು ಹುರಿ ಸಮಸ್ಯೆಗೆ ತುತ್ತಾಗಿದ್ದ ಸುರೇಶ್ ಚಿಕಿತ್ಸಾ ವೆಚ್ಚ ಭರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.
ತಮ್ಮ ಅನಾರೋಗ್ಯ ಹಾಗೂ ಅಂಗವಿಕಲ ಮಗನ ಸಂಕಷ್ಟದಿಂದ ನೊಂದುಕೊಂಡಿದ್ದ ಸುರೇಶ್ ಪತ್ನಿ ಮನೆಯಲ್ಲಿ ನಿದ್ದೆ ಮಾಡುತ್ತಿದ್ದ ವೇಳೆ ಎದ್ದು, ನಿದ್ರೆಯಲ್ಲಿದ್ದ ಮಗುವನ್ನು ನೀರಿನ ಸಂಪ್ ಗೆ ಎಸೆದು, ಬಳಿಕ ಶೇಷಾದ್ರಿಪುರನ ರೈಲ್ವೆ ಹಳಿ ಸಮೀಪ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿದ್ದೆಯಿಂದ ಎಚ್ಚರಗೊಂಡ ಲಕ್ಷ್ಮಿ ನೋಡಿದಾಗ ಮಗ ಹಾಗೂ ಪತಿ ನಾಪತ್ತೆಯಾಗಿದ್ದರು. ಅಕ್ಕಪಕ್ಕದವರನ್ನು ಕರೆದು ಹುಡುಕಾಡಿಸಿದರೂ ಪ್ರಯೋಜನವಾಗಲಿಲ್ಲ. ಈ ವೇಳೆ ನೀರಿನ ಸಂಪ್ ಬಾಗಿಲು ತೆಗೆದ್ರೆ ಮಗುವಿನ ಶವ ತೇಲುತ್ತಿತ್ತು. ಸುರೇಶ್ ಮೊಬೈಲ್ ಗೆ ಕರೆ ಮಾಡಿದ್ರೆ ಉತ್ತರಿಸುತ್ತಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಬಂದಿದೆ.
Discussion about this post