ಮಂಗಳೂರು : ಕೇರಳದಲ್ಲಿ ಅಬ್ಬರಿಸುತ್ತಿರುವ ಕೊರೋನಾ ಸೋಂಕಿನ ನೇರ ಪರಿಣಾಮ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯ ವಿವಿಧ ಜಿಲ್ಲೆಗಳ ಮೇಲಾಗುತ್ತಿದೆ. ಜೊತೆಗೆ ಕಾಸರಗೋಡು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಬೇರೆ ಬೇರೆ ರಾಜ್ಯದಲ್ಲಿದ್ದರೂ ಇದೊಂದು ರೀತಿಯಲ್ಲಿ ಟ್ವಿನ್ಸ್ ಗಳಿದ್ದಂತೆ. ಹೀಗಾಗಿ ಎರಡು ಜಿಲ್ಲೆಯ ನಡುವೆ ಅವಿನಾಭಾವ ಸಂಬಂಧವಿದೆ. ಈ ಕಾರಣದಿಂದ ಕಾಸರಗೋಡಿನಿಂದ ದಕ್ಷಿಣ ಕನ್ನಡಕ್ಕೆ ಸೋಂಕು ಹರಡುವುದರಲ್ಲಿ ಎರಡು ಮಾತಿಲ್ಲ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಘೋಷಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ತನ್ನದೇ ಆದೇಶವನ್ನು ಹೊರಡಿಸಿದೆ. ಆಗಸ್ಟ್ 1 ರಿಂದ ಹೊಸ ನಿಯಮಗಳು ಜಾರಿಗೆ ಬರಲಿದ್ದು, ಆಗಸ್ಟ್ 1 ರಿಂದ 10 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಸರಗೋಡಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಇನ್ನು ಕೇರಳದ ವಿದ್ಯಾರ್ಥಿಗಳು ನೆಗೆಟಿವ್ ವರದಿ ಹೊಂದುವುದು ಕಡ್ಡಾಯವಾಗಿದ್ದು, ಹಾಸ್ಟೆಲ್ ನಲ್ಲಿ ಒಂದು ವಾರದ ಕ್ವಾರಂಟೈನ್ ಗೆ ಸೂಚಿಸಲಾಗಿದೆ. ಈ ವೇಳೆ ಸೋಂಕು ಕಂಡು ಬಂದರೆ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗುತ್ತದೆ..
ಜೊತೆಗೆ ಜಿಲ್ಲೆಯಲ್ಲಿ ಯಾರಿಗೆ ಸೋಂಕು ಕಂಡು ಬಂದರೋ ಅವರನ್ನು ಕೋವಿಡ್ ಸೆಂಟರ್ ಗೆ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದು, ಸೋಂಕಿತರು ಮನೆ ಬಿಟ್ಟು ಹೊರಗೆ ಬಂದರೆ FIR ದಾಖಲಿಸುವ ಎಚ್ಚರಿಕೆ ನೀಡಲಾಗಿದೆ. ಒಂದು ಕುಟುಂಬದಲ್ಲಿ ಇಬ್ಬರು ಸೋಂಕಿತರಿದ್ದರೆ ಅದನ್ನು ಮೈಕ್ರೋ ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಲಾಗುತ್ತದೆ.
ಆಗಸ್ಟ್ 10ರ ತನಕ ಯಾವುದೇ ಸಭೆ ಸಮಾರಂಭ ನಡೆಸದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಮದುವೆಗೆ 50 ಜನ ಸೀಮಿತಗೊಳಿಸಲಾಗಿದೆ. ಜೊತೆಗೆ ಮಾಸ್ಕ್ ಧರಿಸದೆ ಓಡಾಡಿದರೆ ದಂಡ ಕಟ್ಟಿಟ್ಟ ಬುತ್ತಿ.
ಜಿಲ್ಲಾಡಳಿತ ಹೊರಡಿಸಿರುವ ಆದೇಶ ಚೆನ್ನಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಇಂತಹುದೊಂದು ಆದೇಶ ಬೇಕಾಗಿತ್ತು. ಆದರೆ ಈಗಾಗಲೇ ಪ್ರಾರಂಭವಾಗಿರುವ ಶಾಲಾ ಕಾಲೇಜು ಮತ್ತು ಬಾಗಿಲು ತೆರೆದಿರುವ ಧಾರ್ಮಿಕ ಸ್ಥಳದಿಂದಲೂ ಕೊರೋನಾ ಹರಡುವ ಆತಂಕವಿದೆ.
Discussion about this post