ಬೆಂಗಳೂರು : ಭಾರತದಲ್ಲಿ ಲಸಿಕೆ ಹಂಚಿಕೆ ಕಾರ್ಯಕ್ರಮ ಯಶಸ್ವಿಯಾಗದಂತೆ ಕಾಂಗ್ರೆಸ್ ನಾಯಕರೇ ತಡೆದಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಭಾರತದ ವಿಜ್ಞಾನಿಗಳು ಲಸಿಕೆ ಸಂಶೋಧನೆ ಮಾಡಿದ ವೇಳೆ ಇದು ಲಸಿಕೆಯಲ್ಲ ಇದು ನೀರಿಗೆ ಸಮ ಎಂದು ಕಾಂಗ್ರೆಸ್ ನಾಯಕರೇ ದೂರಿದ್ದರು. ಲಸಿಕೆ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡಿದ್ದರು. ಆದರೆ ಈಗ ಗಾಂಧಿ ಪ್ರತಿಮೆ ಮುಂದೆ ಕೂತು ಲಸಿಕೆ ಕೊಡಿಸಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ ಇದು ಹಾಸ್ಯಾಸ್ಪದ ಎಂದರು.
ಲಸಿಕೆ ತೆಗೆದುಕೊಳ್ಳಬೇಡಿ ಎಂದು ಪ್ರಚಾರ ಮಾಡಿದ ಕಾರಣ ಆಗ ಯಾರು ಕೂಡಾ ಲಸಿಕೆ ಪಡೆಯಲಿಲ್ಲ. ಹೀಗಾಗಿ ಉತ್ಪಾದನ ಸಂಸ್ಥೆಗಳು ಅನಿವಾರ್ಯವಾಗಿ ಲಸಿಕೆಗಳನ್ನು ವಿದೇಶಕ್ಕೆ ರಫ್ತು ಮಾಡಬೇಕಾಗಿ ಬಂತು. ಈಗ ಕಾಂಗ್ರೆಸ್ ನವರು ಮೋದಿ ನಿದ್ದೆ ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಸಣ್ಣತನದಿಂದ ಕೂಡಿದ ರಾಜಕೀಯ ಮಾಡಿದ ಕಾರಣದಿಂದಲೇ ಇಂದು ಲಸಿಕೆಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ ಅಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕರ ನೂರು ಕೋಟಿ ಕೊಡುಗೆಯನ್ನು ಟೀಕಿಸಿದ ಕುಮಾರಸ್ವಾಮಿ, ಅವರು ಕೊಡುತ್ತಿರುವುದು ಸರ್ಕಾರ ಹಣ. ಶಾಸಕರ, ಸಂಸದರ ನಿಧಿಯಿಂದ ತಲಾ ಒಂದು ಕೋಟಿ ನೀಡುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಸಾಧ್ಯವಾದ್ರೆ ತಮ್ಮ ಮನೆಯಿಂದ ಒಂದೊಂದು ಕೋಟಿ ತರಲಿ ಎಂದು ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಸವಾಲ್ ಹಾಕಿದ್ದಾರೆ.
Discussion about this post