ದಾವಣಗೆರೆ : ಕೊರೋನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಜನರೊಂದಿಗೆ ಇರುವ ಕೆಲವೇ ಕೆಲವು ಶಾಸಕರ ಪೈಕಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೂಡಾ ಒಬ್ಬರು. ಹಗಲಿರುಳು ಸೋಂಕಿತರ ಸೇವೆಗೆ ಕಂಕಣಬದ್ಧರಾಗಿ ನಿಂತಿರುವ ಅವರು ಡಿಫರೆಂಟ್ ಶಾಸಕರಾಗಿ ಗುರುತಿಸಿಕೊಂಡಿದ್ದಾರೆ.
ಕ್ವಾರಂಟೈನ್ ಕೇಂದ್ರಗಳಲ್ಲಿ ಆರ್ಕೆಸ್ಟ್ರಾ, ಸೋಂಕಿತರಿಗೆ ಇಡ್ಲಿ ತಯಾರಿಕೆ, ಸೋಂಕಿನಿಂದ ಮೃತಪಟ್ಟವರ ಶವ ಸಾಗಿಸಲು ಅಂಬ್ಯುಲೆನ್ಸ್ ಡ್ರೈವರ್ ಹೀಗೆ ರೇಣುಕಾಚಾರ್ಯ ಮಾಡುತ್ತಿರುವ ಕೆಲಸಗಳು ಇತರರಿಗೆ ಮಾದರಿಯಾಗಿದೆ.
ಈ ನಡುವೆ ಕೊರೋನಾ ಸೋಂಕು ನಿವಾರಣೆಗಾಗಿ ಶುಕ್ರವಾರ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಪತ್ನಿ ಜೊತೆಗೂಡಿ ಧನ್ವಂತರಿ ಹಾಗೂ ಮೃತ್ಯಂಜಯ ಹೋಮವನ್ನು ನಡೆಸಿದ್ದರು.
ಇದಾದ ಬಳಿಕ ಕೋವಿಡ್ ಸೋಂಕಿತರೊಂದಿಗೆ ಹಾಗೂ ಸೆಂಟರ್ ಸಿಬ್ಬಂದಿಗಳೊಂದಿಗೆ ಹೋಳಿಗೆ ಊಟವನ್ನು ಸವಿದಿದ್ದರು. ಹೋಮದ ಬಳಿಕ ಅವರೇ ಹೋಳಿಗೆಯನ್ನು ಅವರೇ ಸಿದ್ದ ಮಾಡಿದ್ದರೂ ಕೂಡಾ.
ಇದೀಗ ರೇಣುಕಾಚಾರ್ಯ ಹೋಮ ಮಾಡಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಈ ಸಂಬಂಧ ತಹಶೀಲ್ದಾರ್ ಅವರಿಗೆ ದೂರು ಕೂಡಾ ಸಲ್ಲಿಕೆಯಾಗಿದೆ. ಈ ಹಿನ್ನಲೆಯಲ್ಲಿ ತಹಶೀಲ್ದಾರ್ ಬಸನಗೌಡ ಕೋಟೂರ ಹಾಗೂ ಸಿಪಿಐ ದೇವರಾಜ್ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.
Discussion about this post