ಕೊಪ್ಪಳ : ಕೇರಳದ ಮಾದರಿಯೊಂದನ್ನು ರಾಜ್ಯದ ಆಡಳಿತದಲ್ಲೂ ಅಳವಡಿಸಿಕೊಳ್ಳಲು ರಾಜ್ಯ ಬಿಜೆಪಿ ಚಿಂತನೆ ನಡೆಸಿದೆ. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಸುಳಿವನ್ನು ಬಿಟ್ಟು ಕೊಟ್ಟಿದ್ದು, ಕೇರಳ ಮಾದರಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಕಾರು ನೀಡುವ ಚಿಂತನೆ ನಡೆದಿದೆ ಅಂದಿದ್ದಾರೆ.
ಕೊಪ್ಪಳ ನಗರದಲ್ಲಿ ಆಯೋಜಿಸಲಾಗಿದ್ದ ಜನ ಸ್ವರಾಜ್ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಕೇರಳದ ಗ್ರಾಮ ಪಂಚಾಯತ್ ಸದಸ್ಯರಿಗೆ ಗೌರವಯುತ ವೇತನ, ಗ್ರಾಮ ಪಂಚಾಯತ್ ಅಧ್ಯಕ್ಷರ ಓಡಾಟಕ್ಕೆ ಜೀಪ್ ನೀಡಲಾಗಿದೆ. ಕರ್ನಾಟಕದಲ್ಲೂ ಇದೇ ಮಾದರಿ ಅಳವಡಿಸಿ ಗ್ರಾಮ ಪಂಚಾಯತ್ ಸದಸ್ಯರಿಗೆ ಅಗತ್ಯ ಗೌರವ ನೀಡುವ ಬಗ್ಗೆ ಚಿಂತನೆ ನಡೆದಿದೆ. ಕಾಂಗ್ರೆಸ್ ಗ್ರಾಮ ಪಂಚಾಯತ್ ಸದಸ್ಯರನ್ನು ಗೌರವಿಸಲಿಲ್ಲ, ಬಿಜೆಪಿ ಆ ತಪ್ಪನ್ನು ಈ ಮೂಲಕ ಸರಿ ಮಾಡಲು ಹೊರಟಿದೆ ಎಂದು ಕಟೀಲ್ ಹೇಳಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿರುವುದಾಗಿ ಹೇಳಿರುವ ಕಟೀಲ್, ಶೀಘ್ರದಲ್ಲೇ ಈ ಯೋಜನೆ ಘೋಷಣೆಯಾಗುವ ಸಾಧ್ಯತೆಗಳ ಸುಳಿವು ಕೊಟ್ಟಿದ್ದಾರೆ.
ಕಟೀಲ್ ಅವರ ಯೋಚನೆ ಚೆನ್ನಾಗಿದೆ. ಇದಕ್ಕೂ ಮೊದಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸವಾಗಬೇಕಾಗಿದೆ. ನಳಿನ್ ಅವರ ಕ್ಷೇತ್ರದ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಕಸದ ರಾಶಿ ಬೆಂಗಳೂರನ್ನು ನಾಚಿಸುವಂತೆ ಬೀಳುತ್ತಿದೆ. ರಾಶಿ ರಾಶಿ ಕಸ ಬೀಳುತ್ತಿದ್ದರೂ ಬೋರ್ಡ್ ಆಳವಡಿಸಿದ್ದು ಬಿಟ್ಟರೆ ಮತ್ಯಾವ ಕ್ರಮವೂ ಆಗಿಲ್ಲ. ಹಾಗಂತ ಇದನ್ನು ಪಿಡಿಓ ಮಾತ್ರವಲ್ಲ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಕೂಡಾ ತಡೆಯಲು ಸಾಧ್ಯವಿದೆ. ಆಗ ಸ್ವಾಭಿಮಾನದ ಆಡಳಿತ ನಡೆಸುವ ನೈತಿಕತೆ ಬರುತ್ತದೆ.
Discussion about this post