ಬೆಂಗಳೂರು : ಅನೇಕ ಕುಟುಂಬಗಳನ್ನು ಬೀದಿಪಾಲು ಮಾಡಿರುವ ಆನ್ ಲೈನ್ ಗೇಮ್ ಗಳ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಮೂಲಕ ಗ್ಯಾಂಬ್ಲಿಂಗ್, ಜೂಜು, ಇಸ್ಪೀಟ್ ಅಡ್ಡೆಗಳ ಮೇಲೆ ನಿಯಂತ್ರಣ ತರಲು ಹೊರಟಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸಾಧ್ಯ ಅನ್ನುವುದು ಯಕ್ಷ ಪ್ರಶ್ನೆ. ಹಾಗಿದ್ದರೂ ಪ್ರಯತ್ನವೊಂದು ಪ್ರಾರಂಭವಾಗಿದೆ ಅನ್ನುವುದು ನೆಮ್ಮದಿಯ ವಿಷಯ.
ಈ ನಡುವೆ ಈ ಬಗ್ಗೆ ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ಗಂಭೀರ ಚರ್ಚೆಗಳು, ಸದಸ್ಯರು ಸಾಧಕ ಬಾಧಕ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಛಾನ್ಸ್, ಲಕ್ಕಿ ಹೀಗೆ ವಿವಿಧ ಹೆಸರುಗಳಲ್ಲಿ ನಡೆಯುವ ಗೇಮ್ ಗಳನ್ನು ತಡೆಯುವ ಬಗ್ಗೆ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.ಮಾತ್ರವಲ್ಲದೆ ಪೊಲೀಸರ ಕಾರ್ಯವೈಖರಿ ಬಗ್ಗೆಯೂ ಕ್ಯಾತೆ ತೆಗೆದಿದ್ದಾರೆ. ಪೊಲೀಸರು ಹೇಗೆ ಇದರಲ್ಲಿ ಪಾಲುದಾರರು ಅನ್ನುವುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅದ್ಯಾವುದೇ ಗೇಮ್ ಗಳು ಪೊಲೀಸರ ಗಮನಕ್ಕೆ ಬಾರದಿರುವುದಿಲ್ಲ. ಪೊಲೀಸರು ಮನಸ್ಸು ಮಾಡಿದರೆ ಯಾವತ್ತೋ ಇದನ್ನು ತಡೆಯಬಹುದಿತ್ತು ಅಂದಿದ್ದಾರೆ.
ಈ ನಡುವೆ ಕ್ಯಾಂಡಿಕ್ರಶ್ ಗೇಮ್ ಬಗ್ಗೆ ಶಾಸಕ ಶರತ್ ಬಚ್ಚೇಗೌಡ ಸರ್ಕಾರದ ಗಮನ ಸೆಳೆದಿದ್ದು, ಇಲ್ಲೂ ಕೂಡಾ ದುಡ್ಡು ಕೊಟ್ಟು ಆಟವಾಡಲು ಅವಕಾಶವಿದೆ. ಹೀಗಾಗಿ ಇದು ಬ್ಯಾನ್ ಆಗಬೇಕಾಗುತ್ತದೆ. ಇದನ್ನು ಸರ್ಕಾರ ಬ್ಯಾನ್ ಮಾಡಲಿದೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರ್ಕಾರ ಉತ್ತರಿಸಿದ್ದು, ಹಣ ಕಟ್ಟಿ ಜೂಜು ಸ್ವರೂಪದಲ್ಲಿ ಯಾವೆಲ್ಲಾ ಗೇಮ್ ನಡೆಯುತ್ತದೆಯೋ ಅವೆಲ್ಲವನ್ನೂ ಹೊಸ ತಿದ್ದುಪಡಿ ಮೂಲಕ ನಿಯಂತ್ರಿಸಲಾಗುವುದು ಅಂದಿದ್ದಾರೆ. ಅಲ್ಲಿಗೆ ಇನ್ಮುಂದೆ ಕ್ಯಾಂಡಿಕ್ರಶ್ ನಲ್ಲಿ ಹಣ ಕಟ್ಟಿ ಆಡಲು ಹೋದರೆ ಜೈಲು ಸೇರಬೇಕಾಗುತ್ತದೆ.
Discussion about this post