ಬೆಂಗಳೂರು : ಇನ್ಮುಂದೆ ಬಾಡಿಗೆ ಮನೆಗೆ ಹೋಗುವವರು 11 ತಿಂಗಳ ಅಡ್ವಾನ್ಸ್ ಕಟ್ಟಬೇಕಾಗಿಲ್ಲ. ಕೇವಲ 2 ತಿಂಗಳ ಅಡ್ವಾನ್ಸ್ ಕಟ್ಟಿದರೆ ಸಾಕು ಎಂದು ಕೇಂದ್ರ ಸರ್ಕಾರ ಹೇಳಿದೆ.ಈ ಸಂಬಂಧ ಮಾದರಿ ಬಾಡಿಗೆ ಕಾಯ್ದೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ.
ಹಾಗಂತ ತಕ್ಷಣದಿಂದ ಈ ಕಾಯ್ದೆ ಜಾರಿಗೆ ಬರೋದಿಲ್ಲ. ಕೇಂದ್ರ ಸರ್ಕಾರ ಇದನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಿಕೊಡಲಿದೆ. ರಾಜ್ಯಗಳು ಬೇರೆ ಬೇರೆ ಬಾಡಿಗೆ ಕಾಯ್ದೆಗಳಿರುವ ಹಿನ್ನಲೆಯಲ್ಲಿ ತಾವು ಹೊಂದಿರುವ ಬಾಡಿಗೆ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತಂದು ಹೊಸ ಅಂಶಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.
ಹೊಸ ಕಾಯ್ದೆಯ ಪ್ರಕಾರ ಮಾಲೀಕ ಹಾಗೂ ಬಾಡಿಗೆದಾರನಿಗೆ ನ್ಯಾಯ ಒದಗಿಸಲು ಬಾಡಿಗೆ ಪ್ರಾಧಿಕಾರ ರಚನೆ, ಬಾಡಿಗೆ ಸಂಬಂಧಿ ಸಮಸ್ಯೆಗಳಿದ್ದರೆ ಜಿಲ್ಲಾ ಬಾಡಿಗೆ ನ್ಯಾಯಾಧೀಕರಣಕ್ಕೆ ಮಾಲೀಕರು ಅಥವಾ ಬಾಡಿಗೆದಾರರು ದೂರು ಕೊಡಬಹುದಾಗಿದೆ.
ಮನೆ ಬಾಡಿಗೆ ಸಲುವಾಗಿ 2 ತಿಂಗಳ ಮುಂಗಡ ಹಣ ಭದ್ರತಾ ಠೇವಣಿಯಾದರೆ, ವಾಣಿಜ್ಯ ಕಟ್ಟಡಗಳಿಗೆ 6 ತಿಂಗಳ ಬಾಡಿಗೆ ಹಣವನ್ನು ಭದ್ರತಾ ಠೇವಣಿಯಾಗಿ ಇರಿಸಬೇಕು.
ಬಾಡಿಗೆ ಒಪ್ಪಂದ ಮುಕ್ತಾಯದ ಬಳಿಕ ಬಾಡಿಗೆದಾರ ಮನೆ ಖಾಲಿ ಮಾಡದಿದ್ರೆ ಈ ಹೊಸ ಕಾಯ್ದೆ ಮಾಲೀಕನ ನೆರವಿಗೆ ಧಾವಿಸುತ್ತದೆ. ಮನೆಯಲ್ಲಿ ಬಾಡಿಗೆದಾರನು ಕಟ್ಟಡಕ್ಕೆ ಹಾನಿ ಮಾಡಿದ್ದರೆ ಅದರ ವೆಚ್ಚವನ್ನು ಬಾಡಿಗೆದಾರನೇ ಭರಿಸಬೇಕು. ಮಾತ್ರವಲ್ಲದೆ ಮನೆ ಖಾಲಿ ಮಾಡದಿದ್ರೆ ಮಾಲೀಕ ಮನೆ ಬಾಡಿಗೆಯನ್ನು ಮುಂದಿನ ಎರಡು ತಿಂಗಳ ಅವಧಿಗೆ ಡಬಲ್ ಮಾಡಬಹುದಾಗಿದೆ. 2 ತಿಂಗಳ ಬಳಿಕ ಮನೆ ಖಾಲಿ ಮಾಡದಿದ್ರೆ ಬಾಡಿಗೆಯನ್ನು 4 ಪಟ್ಟು ಹೆಚ್ಚಿಸಬಹುದು.
ಇನ್ನು ಮನೆ ಮಾಲೀಕ 24 ಗಂಟೆಗಳ ಮುಂಚೆ ನೋಟಿಸ್ ಕೊಟ್ಟು ಬಾಡಿಗೆದಾರನ ಮನೆಗೆ ಪ್ರವೇಶಿಸುವ ಹಕ್ಕು ಹೊಂದಿರುತ್ತಾನೆ.
Discussion about this post