ಬೆಂಗಳೂರು : ರಾಜ್ಯ ಬಿಜೆಪಿ ಬೆಳವಣಿಗೆ ಫೈನಲ್ ಹಂತ ತಲುಪಿದ್ದು ಜುಲೈ 26 ರಂದು ಯಡಿಯೂರಪ್ಪ ಅವರ ನಿರ್ಗಮನದೊಂದಿಗೆ ಹೊಸ ಅಧ್ಯಾಯ ಪ್ರಾರಂಭವಾಗಲಿದೆ. ಈಗಾಗಲೇ ತಮ್ಮ ನಿರ್ಗಮನವನ್ನು ಖಚಿತಪಡಿಸಿರುವ ಯಡಿಯೂರಪ್ಪ ಮುಂದಿನ ಎಲ್ಲಾ ಬೆಳವಣಿಗೆ ಹೈಕಮಾಂಡ್ ನಿರ್ಧಾರ ಮೇಲೆ ನಿಂತಿದೆ ಅಂದಿದ್ದಾರೆ. ಜೊತೆಗೆ ತಮ್ಮ ಉತ್ತರಾಧಿಕಾರಿ ಯಾರು ಅನ್ನುವ ಕುರಿತಂತೆ ಆಸಕ್ತಿ ಇಲ್ಲ ಅನ್ನುವಂತೆ ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ ಯಡಿಯೂರಪ್ಪ ನಿರ್ಗಮನ ರಾಜ್ಯದಲ್ಲಿ ಪಕ್ಷಕ್ಕೆ ಹೊಡೆತ ನೀಡಲಿದೆ ಅನ್ನುವುದು ದೆಹಲಿ ವರಿಷ್ಠರಿಗೂ ಗೊತ್ತಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಯಾವುದೇ ಡ್ಯಾಮೇಜ್ ಆಗಬಾರದು ಅನ್ನುವ ರೀತಿಯಲ್ಲಿ ಹೊಸ ಸರ್ಕಾರ ರಚನೆಯ ಸರ್ಕಸ್ ನಡೆಯುತ್ತಿದೆ.
ಈ ನಡುವೆ ಯಡಿಯೂರಪ್ಪ ಅವರ ರಾಜೀನಾಮೆಯೊಂದಿಗೆ ಅವರ ಸಂಪುಟವೂ ವಿಸರ್ಜನೆಗೊಳ್ಳಲಿದೆ. ಹೀಗಾಗಿ ಹೊಸ ಮುಖ್ಯಮಂತ್ರಿ, ಹೊಸ ಸಂಪುಟ ರಚನೆ ಖಚಿತ ಎನ್ನಲಾಗಿದ್ದು, ಹೊಸ ಹಾಗೂ ಯುವ ಮುಖಗಳಿಗೆ ಮಂತ್ರಿ ಸ್ಥಾನ ನೀಡಲು ಹೈಕಮಾಂಡ್ ನಿರ್ಧರಿಸಿದೆ. ಇದರೊಂದಿಗೆ ಕಳೆದ ಸಲ ಚುನಾವಣಾ ಪ್ರಚಾರ ಸಭೆಗಳಲ್ಲಿ ನೀಡಿದ ಭರವಸೆಯನ್ನು ಈಡೇರಿಸುವ ಅನಿವಾರ್ಯತೆಯೂ ಹೈಕಮಾಂಡ್ ಮುಂದಿದೆ.
ಈ ನಿಟ್ಟಿನಲ್ಲಿ ಈಗ ಡಿಸಿಎಂಗಳಾಗಿರುವ ಡಾ. ಅಶ್ವಥ್ ನಾರಾಯಣ, ಲಕ್ಷ್ಮಣ ಸವದಿ ಹಾಗೂ ಗೋವಿಂದ ಕಾರಜೋಳ ಅವರನ್ನು ಕೈ ಬಿಟ್ಟು ಹೊಸಬರಿಗೆ ಡಿಸಿಎಂ ಸ್ಥಾನ ಕೊಡುವ ಚಿಂತನೆ ನಡೆದಿದೆ. ಈ ಪ್ರಕಾರ ಒಕ್ಕಲಿಗ, ಲಿಂಗಾಯತ, ಎಸ್ ಸಿ ಹಾಗೂ ಎಸ್ ಟಿ ಸಮುದಾಯಗಳನ್ನು ಸಮಾಧಾನ ಪಡಿಸಲು ಯತ್ನಿಸಲಾಗಿದೆ.
ಅದರಂತೆ ಒಕ್ಕಲಿಗ ಸಮುದಾಯದಿಂದ ಸಿಟಿ ರವಿ, ಲಿಂಗಾಯತ ಪ್ರಾತಿನಿಧ್ಯದಲ್ಲಿ ಅರವಿಂದ ಬೆಲ್ಲದ್, ವಾಲ್ಮೀಕಿ ಸಮುದಾಯದ ಶ್ರೀರಾಮುಲು, ಮತ್ತು ಎಸ್ ಸಿ ಕಡೆಯಿಂದ ಅರವಿಂದ್ ಲಿಂಬಾವಳಿ ಡಿಸಿಎಂಗಳಾಗುವ ಸಾಧ್ಯತೆಗಳಿದೆ.
Discussion about this post