ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಪ್ರಿಯಾಂಕ ತಿಮ್ಮೇಶ್ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಚಂದ್ರಚೂಡ್ ಜೊತೆಗಿನ ಕಿರಿಕ್ ಕಾರಣದಿಂದಲೇ ಸಾಕಷ್ಟು ಸುದ್ದಿ ಮಾಡಿದ್ದ ಪ್ರಿಯಾಂಕ, ಒಂದು ನಿಟ್ಟಿನಲ್ಲಿ ಪತ್ರವಳ್ಳಿ ಖ್ಯಾತಿಯ ಚಂದ್ರಚೂಡ್ ಅವರಿಂದ ಸಾಕಷ್ಟು ಕಿರಿಕಿರಿಯನ್ನೂ ಅನುಭವಿಸಿದ್ದರು.
ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡ ಬಳಿಕ ಮನೆಯಿಂದ ಹೊರ ಬಂದಿದ್ದ ಪ್ರಿಯಾಂಕ, ಚಂದ್ರಚೂಡ್ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಆದರೆ ಚಂದ್ರಚೂಡ್ ತನ್ನ ವಿರುದ್ಧ ಬಳಸಿದ್ದ ಶಬ್ಧಗಳ ಬಗ್ಗೆ ಅವರು ಪದೇ ಪದೇ ಅಸಮಾಧಾನ ಹೊರ ಹಾಕುತ್ತಿದ್ದರು.
ಎರಡನೇ ಇನ್ನಿಂಗ್ಸ್ ನಲ್ಲೂ ಪ್ರಿಯಾಂಕ ಹಾಗೂ ಚಂದ್ರಚೂಡ್ ನಡುವೆ ಪದೇ ಪದೇ ಕಿರಿಕಿರಿ ಮುಂದುವರಿದಿತ್ತು. ಚಂದ್ರಚೂಡ್ ಅವರ ಇಲ್ಲ ಸಲ್ಲದ ಆರೋಪಗಳಿಂದ ಬೇಸತ್ತು ಹೋಗಿದ್ದ ಪ್ರಿಯಾಂಕ ಅನೇಕ ಸಲ ತಮ್ಮ ಆಕ್ರೋಶ ಹೊರ ಹಾಕಿದ್ದರು. ಕೆಲವು ಬಾರಿ ಚಕ್ರವರ್ತಿ ಜೊತೆ ಏರು ದನಿಯಲ್ಲೇ ಮಾತನಾಡಿದ್ದರು.
ಹಾಗೇ ನೋಡಿದರೆ ಪ್ರಿಯಾಂಕ ಈ ಹಿಂದೆಯೇ ಮನೆಯಿಂದ ಹೊರ ಬರಬೇಕಾಗಿತ್ತು. ಆದರೆ ನಿಧಿ ಸುಬ್ಬಯ್ಯ ಪ್ರಿಯಾಂಕ ಅವರನ್ನು ಸೇವ್ ಮಾಡಿದ್ದರು. ಈ ಕಾರಣದಿಂದ ಮತ್ತಷ್ಟು ದಿನಗಳ ಕಾಲ ಮಹಾಮನೆ ವಾಸವನ್ನು ಮುಂದುವರಿಸುವಂತಾಗಿತ್ತು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಪ್ರೀತಿಯಿಂದ ಅನ್ನುವ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರಿಯಾಂಕ, ಗಣಪ ಅನ್ನುವ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದರು. ಬಳಿಕ ಎರಡು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಅವರು ನಂತರ ಮಲಯಾಳಂ, ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಪ್ರಸ್ತುತ ಅರ್ಜುನ್ ಗೌಡ ಹಾಗೂ ಶುಗರ್ ಲೆಸ್ ಅನ್ನುವ ಎರಡು ಪ್ರಾಜೆಕ್ಟ್ ಗಳು ಅವರ ಕೈಯಲ್ಲಿದ್ದು, ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಅವಕಾಶಗಳು ಕೈ ಬೀಸಿ ಕರೆಯಬಹುದು ಅಂದುಕೊಂಡರೆ, ಕೊರೋನಾ ಅನ್ನುವ ಮಹಾಮಾರಿ ಎಲ್ಲಾ ಅವಕಾಶಗಳನ್ನು ನುಂಗಿ ಕೂತಿದೆ.
Discussion about this post